ಜೆಡಿಎಸ್‌ಗೆ ಮನ್ನಣೆ-ಅಪ್ಪ-ಮಕ್ಕಳ ಪಕ್ಷ ಅಂತ ಟೀಕಿಸಲಿ: ದೇವೇಗೌಡ
ಹಾಸನ, ಸೋಮವಾರ, 13 ಡಿಸೆಂಬರ್ 2010( 15:38 IST )
ಹಿಂದುಳಿದ ವರ್ಗದವರಿಗೆ ತಾಲೂಕು ಪಂಚಾಯ್ತಿ ಮತ್ತು ಜಿ.ಪಂ ಚುನಾವಣೆಯಲ್ಲಿ ಅನ್ಯಾಯವಾಗದಂತೆ ಪಕ್ಷದೊಳಗೆ ಆಂತರಿಕ ಮೀಸಲು ನೀಡಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸಿಎಂ ಆದಾಗಿನಿಂದ ಕುಮಾರಸ್ವಾಮಿ ಅವಧಿ ತನಕವೂ ಎಲ್ಲ ವರ್ಗಗಳಿಗೆ ಮೀಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈ ಸರಕಾರ ಹಿಂದುಳಿದ ವರ್ಗದವರ ಮೀಸಲಾತಿ ಕಿತ್ತುಕೊಂಡು ಅನ್ಯಾಯ ಮಾಡಿದೆ ಎಂದರು.
ಮೀಸಲಾತಿ ಬಗ್ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಹೇಳುತ್ತ, ಇತ್ತ ದಿಢೀರ್ ಚುನಾವಣೆ ಘೋಷಿಸುವ ಮೂಲಕ ಸಿಎಂ ಯಡಿಯೂರಪ್ಪ ಆತ್ಮವಂಚನೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಚುನಾವಣೆ ಪ್ರಚಾರಕ್ಕೆ ಎಲ್ಲಿಯೂ ಹೋಗುವುದಿಲ್ಲ. ಕುಮಾರಸ್ವಾಮಿ ತಮ್ಮ ಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನ್ನ ಅವಶ್ಯಕತೆ ಇದೆ ಎಂದರೆ ಮಾತ್ರ ಒಂದೆರಡು ದಿನ ಬರುತ್ತೇನೆ ಎಂದರು.
ಜನತಾ ಪರಿವಾರದ ಪ್ರಮುಖ ನಾಯಕರಲ್ಲಿ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಬೊಮ್ಮಾಯಿ ಈಗಿಲ್ಲ. ನಾನೊಬ್ಬ ಮಾತ್ರ ಉಳಿದಿದ್ದೇನೆ. ಅಂದು ಯಾವ್ಯಾವುದೊ ಕಾರಣಕ್ಕೆ ಪಕ್ಷ ಬಿಟ್ಟು ಹೋದವರು ಮರಳಿ ಪಕ್ಷಕ್ಕೆ ಬರುವುದಾದರೆ ಸ್ವಾಗತ. ಹಳೆ ಕಹಿ ಘಟನೆಗಳನ್ನು ಮತ್ತೆ ಪ್ರಸ್ತಾಪಿಸದೆ ಮರೆಯೋಣ ಎಂದರು.
ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ, ಅವರ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವುದಿಲ್ಲ. ಯಾರ್ಯಾರಿಗೆ ತಾವು ಇರುವಲ್ಲಿಯೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆಯೋ ಅಲ್ಲಿಯೇ ಇರಲಿ. ಅಭ್ಯಂತರವೇನಿಲ್ಲ. ಅಪ್ಪ ಮಕ್ಕಳ ಪಕ್ಷ ಎಂದು ಟೀಕಿಸುವವರಿದ್ದಾರೆ, ಚಿಂತೆ ಇಲ್ಲ. ಜನರು ಅದಕ್ಕೆ ಮನ್ನಣೆ ನೀಡದೆ ಪಕ್ಷಕ್ಕೆ ಬರುತ್ತಿದ್ದಾರೆ. ಚನ್ನಿಗಪ್ಪ ಪಕ್ಷಕ್ಕೆ ಬರುವುದಾಗಿ ಅವರೇ ಹೇಳಿದ್ದಾರೆ. ಇನ್ನು ಹಲವು ಪ್ರಮುಖರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.