ಕೃಷಿ ಆಧಾರಿತ ಕೈಗಾರಿಗಳು ಹೆಚ್ಚು ಸ್ಥಾಪನೆಯಾಗಬೇಕು: ಖರ್ಗೆ
ವಿಜಾಪುರ, ಸೋಮವಾರ, 13 ಡಿಸೆಂಬರ್ 2010( 15:44 IST )
ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಕೃಷಿ ಆಧಾರಿತ ಕೈಗಾರಿಗಳು ಹೆಚ್ಚು ಸ್ಥಾಪನೆಯಾಗಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಿಜಾಪುರ ತಾಲೂಕಿನ ಕಾರಜೋಳದಲ್ಲಿ ಶಾಸಕ ಎಂ.ಬಿ.ಪಾಟೀಲ ಹಾಗೂ ತಮಿಳುನಾಡಿನ ಧನಲಕ್ಷ್ಮಿ ಶ್ರೀನಿವಾಸನ್ ಗ್ರೂಪ್ ಸಹಯೋಗದ ಬಸವೇಶ್ವರ ಶುಗರ್ಸ್ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಅವರು, ಈಗ ಸ್ಥಾಪನೆಯಾಗುತ್ತಿರುವ ಬಸವೇಶ್ವರ ಸಕ್ಕರೆ ಕಾರ್ಖಾನೆ ರೈತರ ಆರ್ಥಿಕ ಪ್ರಗತಿಗೆ ಪೂರಕವಾಗಲಿ ಎಂದು ಆಶಿಸಿದರು.
ದೇಶದಲ್ಲಿ ಹೆಚ್ಚಿನ ಕಬ್ಬು ಬೆಳೆದರೂ ಹೊರಗಿನಿಂದ ಸಕ್ಕರೆ ತರಿಸುವ ಪದ್ಧತಿ ಇದೆ. ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಡಿಸ್ಟಿಲರಿ ಸ್ಥಾಪನೆಯಿಂದ ಆರ್ಥಿಕ ಬಲ ಬರುತ್ತದೆ ಎಂದರು. ಬಸವೇಶ್ವರ ಶುಗರ್ಸ್ ಹೊಸ ರೂಪ ತಾಳಬೇಕು. ಹಳೆ ಸಾಮಾನು ತಂದು ಜೋಡಿಸಿ ವರ್ಷದಲ್ಲೇ ಬಂದ್ ಆಗುವ ಕೆಲಸ ಆಗಬಾರದು. ಕಾಯಂ ನೌಕರರಿಗೆ ಕಾನೂನು ಬದ್ಧ ಸೌಲಭ್ಯಗಳನ್ನು ಕೊಡಬೇಕು ಎಂದು ಕಾರ್ಮಿಕ ಸಚಿವನಾಗಿ ಸಲಹೆ ನೀಡುತ್ತಿರುವುದಾಗಿ ಖರ್ಗೆ ತಿಳಿಸಿದರು.