ನೆರೆ ಕಷ್ಟ, ಸರಕಾರ ಭ್ರಷ್ಟ ಇದು ನಮ್ಮ ಪ್ರಣಾಳಿಕೆ: ಪರಮೇಶ್ವರ್
ಹುಬ್ಬಳ್ಳಿ, ಸೋಮವಾರ, 13 ಡಿಸೆಂಬರ್ 2010( 15:46 IST )
ನೆರೆ ಸಂತ್ರಸ್ತರ ಸಂಕಷ್ಟ ಹಾಗೂ ಸರಕಾರದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳನ್ನಾಗಿ ಅಳವಡಿಸಿಕೊಂಡು ಈ ಬಾರಿಯ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಎದುರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ವಿಜಾಪುರದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿತ್ತು. ಆದರೆ, ಆಡಳಿತಾರೂಢ ಪಕ್ಷ ಅಂತಹ ಯಾವುದೇ ಕ್ರಮಕ್ಕೆ ಮುಂದಾಗದೇ ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಈ ಕೊರತೆ ನೀಗಿಸಲು ಕಾಂಗ್ರೆಸ್ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ. ತಮ್ಮ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಅಂತಿಮಗೊಳಿಸಿ 'ಎ' ಹಾಗೂ `ಬಿ' ಫಾರಂಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಅಕ್ರಮ ಹಣ ವ್ಯಯಿಸಲು ಬಿಜೆಪಿ ಸರಕಾರ ಎಲ್ಲ ರೀತಿಯ ಕಸರತ್ತು ನಡೆಸಿದೆ. ಇಂತಹ ಕೃತ್ಯಕ್ಕೆ ಚುನಾವಣಾ ಆಯೋಗವೂ ಆಡಳಿತಾರೂಢ ಪಕ್ಷದೊಂದಿಗೆ ಶಾಮೀಲಾಗಿದೆ ಎಂಬಂತೆ ಭಾಸವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಶೇ. 56 ರಷ್ಟು ಮತಗಳನ್ನು ಹೊಂದಿದೆ. ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.