ಬಿಜೆಪಿ ಟೀಕಿಸುವ ಹಕ್ಕಿಲ್ಲ-ಸೋನಿಯಾ ಬಗ್ಗೆ ಗೌರವವಿದೆ; ಸಿಎಂ
ಬೆಂಗಳೂರು, ಸೋಮವಾರ, 13 ಡಿಸೆಂಬರ್ 2010( 18:17 IST )
2ಜಿ ಸ್ಪೆಕ್ಟ್ರಂ, ಕಾಮನ್ವೆಲ್ತ್ ಹಗರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಕರ್ಮಕಾಂಡದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ರಾಜ್ಯ ಸರಕಾರವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರ ಬಗ್ಗೆ ನಾನು ಅಪಾರ ಗೌರವ ಹೊಂದಿರುವ ವ್ಯಕ್ತಿಯಾಗಿದ್ದೇನೆ. ಕಾಂಗ್ರೆಸ್‌ನ ಬೇರೆಲ್ಲಾ ಮುಖಂಡರಿಗಿಂತ ಸೋನಿಯಾಗೆ ನಾನು ಹೆಚ್ಚಿನ ಗೌರವ ಕೊಡುತ್ತೇನೆ. ಹಾಗಾಗಿ ನಾನು ಅವರ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರಾಜ್ಯ ಸರಕಾರವನ್ನು ಅತೀ ಭ್ರಷ್ಟ ಎಂದು ಟೀಕಿಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು, ಇಡೀ ದೇಶವೆ ತಲೆತಗ್ಗಿಸುವಂತಹ ಹಗರಣಗಳು ನಡೆದು ಯುಪಿಎ ಸರಕಾರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಇಂತಹ ಸರಕಾರದ ನೇತೃತ್ವ ವಹಿಸಿಕೊಂಡಿರುವ ಮುಖಂಡರಿಗೆ ನನ್ನ ಸರಕಾರವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರಕಾರದ ಎರಡೂವರೆ ವರ್ಷಗಳಲ್ಲಿ ನಡೆದಿರುವ ಹಗರಣಗಳನ್ನು ವಿರೋಧ ಪಕ್ಷಗಳು ಜನತೆಯ ಮುಂದಿಡಲಿ. ನಾನು ಎಸ್.ಎಂ.ಕೃಷ್ಣ ಅವಧಿಯಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಡೆಸಿರುವ ಅವ್ಯವಹಾರಗಳನ್ನು ಜನತೆಯ ಮುಂದಿಡುತ್ತೇನೆ. ಎಲ್ಲವೂ ಚರ್ಚೆಯಾಗಲಿ. ಜನತೆಯೇ ತೀರ್ಮಾನ ಮಾಡುತ್ತಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ಜನತೆಗೆ ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಗೊತ್ತಿದೆ. ವಿರೋಧ ಪಕ್ಷಗಳಿಗೆ ಮುಂಬರುವ ಪಂಚಾಯ್ತಿ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆಂದು ತಿರುಗೇಟು ನೀಡಿದ್ದಾರೆ.