ಭದ್ರಾ ನಾಲೆ ಸುರಂಗವನ್ನು ತೆಪ್ಪದಲ್ಲಿ ಕುಳಿತು ಕುತೂಹಲದಿಂದ ನೋಡಲು ತೆರಳಿದ್ದ ಸಂದರ್ಭದಲ್ಲಿ ಒಂದೇ ಕುಟುಂಬದ ಆರು ಮಂದಿ ಜಲಸಮಾಧಿಯಾದ ದಾರುಣ ಘಟನೆ ಚನ್ನಗಿರಿಯ ಹಿರೇಮಳಲಿ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಗ್ರಾಮದ ರಹಮತ್ತುಲ್ಲಾ (45), ಫಾತಿಮಾ (40), ಪರ್ವಿನ್ ಬಾನು (40), ನಗೀನಾಬಾನು (20), ತೌಫಿಕ್ (18), ಶಬೀನಾ (14) ಸಾವನ್ನಪ್ಪಿದ್ದಾರೆ.
ಸುಮಾರು ಎರಡೂವರೆ ಕಿ.ಮೀ.ಉದ್ದದ ಸುರಂಗವನ್ನು ಕುತೂಹಲದಿಂದ ನೋಡಲು ನಾಲೆ ಇಳಿದಿದ್ದ ಈ ಕುಟುಂಬ ಅಲ್ಲಿಯೇ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ತೆಪ್ಪ ಹತ್ತಿ, ನಾಲೆ ಸುರಂಗ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಈ ಘಟನೆ ನಡೆದಿದೆ.
ರಹಮತ್ತುಲ್ಲಾ ಮತ್ತು ಕುಟುಂಬದ 9 ಮಂದಿ ಶಿವಮೊಗ್ಗದಿಂದ ಹೊಳಲ್ಕೆರೆಯಲ್ಲಿ ತಮ್ಮ ಸಂಬಂಧಿ ಮನೆಗೆ ಹೋಗಿದ್ದರು. ಹೊಳಲ್ಕೆರೆ ಪಟ್ಟಣದಿಂದ ಭಾನುವಾರ ಹೊರಟಿದ್ದ ಈ ಕುಟುಂಬ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ತಮ್ಮ ಸಂಬಂಧಿ ಅಬ್ದುಲ್ ನಜೀರ್ ಮಾಸ್ಟರ್ ಮನೆಗೆ ಆಗಮಿಸಿದ್ದರು. ಭಾನುವಾರ ನಲ್ಲೂರಿನಲ್ಲಿ ಉಳಿದುಕೊಂಡು, ಸೋಮವಾರ ಮಾರುತಿ ವ್ಯಾನ್‌ನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದರು.
ನಲ್ಲೂರಿನಿಂದ ಹಿರೇಮಳಲಿ, ಮಾಡಾಳ್, ಮಾವಿನಕಟ್ಟೆ ಮಾರ್ಗವಾಗಿ ರಹಮತ್ತುಲ್ಲಾ ಕುಟುಂಬ ಹಿಂದಿರುಗುವಾಗ ಗುಡ್ಡ ಕೊರೆದು, ಸುರಂಗ ನಿರ್ಮಿಸಿದ್ದನ್ನು ನೋಡಲು ಭದ್ರಾ ನಾಲೆಗೆ ತೆಪ್ಪದಲ್ಲಿ ತೆರಳಿ ದಾರುಣವಾಗಿ ಸಾವನ್ನಪ್ಪಿದ್ದಾರೆ.