ಚುನಾವಣೆ ಎಫೆಕ್ಟ್-ವಿದ್ಯುತ್ ದರ ಏರಿಕೆ ಸದ್ಯಕ್ಕಿಲ್ಲ: ಶೋಭಾ
ಬೆಂಗಳೂರು, ಮಂಗಳವಾರ, 14 ಡಿಸೆಂಬರ್ 2010( 10:11 IST )
ವಿದ್ಯುತ್ ದರ ಏರಿಕೆ ಪ್ರಸ್ತಾಪದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡುವುದಾಗಿ ಇಂಧನ ಹಾಗೂ ಆಹಾರ, ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಆಯೋಗ ವಿದ್ಯುತ್ ದರ ಪರಿಷ್ಕರಿಸಿ ಶಿಫಾರಸು ಸಲ್ಲಿಸಿದೆ. ಆದರೆ, ಸರಕಾರ ಶಿಫಾರಸು ಜಾರಿಗೆ ತರುವ ಕುರಿತು ಈವರೆಗೆ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಿದರೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ದರ ಪರಿಷ್ಕರಣೆ ಸಂಬಂಧಿಸಿದ ಕಡತ ಇನ್ನೂ ನಮ್ಮ ಕೈಸೇರಿಲ್ಲ. ಆದರೂ ದರ ಏರಿಕೆ ಜನಸಾಮಾನ್ಯರ ಮೇಲೆ ಬೀಳಬಹುದಾದ ಹೊರೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೇ ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಪರಿಸ್ಥಿತಿ ಸುಧಾರಿಸಿದೆ. ಜಲಾಶಯಗಳು ಭರ್ತಿಯಾಗಿರುವುದೇ ಇದಕ್ಕೆ ಕಾರಣ. ಜತೆಗೆ ಶಾಖೋತ್ಪನ್ನ ಆಧಾರಿತ ಘಟಕಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಲಭ್ಯವಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಇದ್ದರೆ ಬೇಸಿಗೆಯಲ್ಲೂ ತೊಂದರೆ ಎದುರಾಗದು ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿ ಯೂನಿಟ್‌ಗೆ ಸರಾಸರಿ 30 ಪೈಸೆ ಜಾಸ್ತಿ ಮಾಡುವುದಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಇತ್ತೀಚೆಗಷ್ಟೇ ತಿಳಿಸಿತ್ತು. ಆದರೆ ಆ ಪ್ರಸ್ತಾಪಕ್ಕೆ ಸರಕಾರದ ಅಂಕಿತ ಬೀಳಬೇಕಿದೆ.