ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಗಾರಪ್ಪ ಮೊಮ್ಮಕ್ಕಳನ್ನು ಆಟವಾಡಿಸಿಕೊಂಡಿರಲಿ:ಕುಮಾರ್ ಬಂಗಾರಪ್ಪ (Bagalore | KPCC | Bangarappa | Congress | JDS | Kumar Bangarappa)
'ಈ ಇಳಿವಯಸ್ಸಿನಲ್ಲಿ ಪಕ್ಷಾಂತರ ಮಾಡುವ ಬದಲು ಬಂಗಾರಪ್ಪನವರು ಮೊಮ್ಮಕ್ಕಳನ್ನು ಆಟವಾಡಿಸಿಕೊಂಡಿರಲಿ' ಎಂದು ಕಾಂಗ್ರೆಸ್ ಮುಖಂಡ, ಪುತ್ರ ಕುಮಾರ್ ಬಂಗಾರಪ್ಪ ಅವರು ತಂದೆಗೆ ನೀಡಿರುವ ಸಲಹೆ.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿರುವ ಬಂಗಾರಪ್ಪ ಅವರ ಬಗ್ಗೆ ಕುಮಾರ್ ಬಂಗಾರಪ್ಪ ಸುದ್ದಿಗಾರರ ಜತೆ ಮಾತನಾಡುತ್ತ ನೀಡಿರುವ ಪ್ರತಿಕ್ರಿಯೆ ಇದಾಗಿದೆ.
ಬಂಗಾರಪ್ಪ ಅವರು ಜೆಡಿಎಸ್ ಸೇರುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ಸೋಮವಾರ ನವದೆಹಲಿ ಆಗಮಿಸಿದ್ದ ಅವರು ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ವಿವರಣೆ ನೀಡಿರುವುದಾಗಿ ತಿಳಿಸಿದ್ದಾರೆ.
78ರ ಇಳಿವಯಸ್ಸಿನಲ್ಲಿ ಬಂಗಾರಪ್ಪನವರು ಪಕ್ಷಾಂತರ ಮಾಡುತ್ತಿರುವುದು ಯುವ ನಾಯಕರಿಗೆ ಮಾಡುವ ಅನ್ಯಾಯವಾಗಿದೆ. ಹಾಗಾಗಿ ಅವರು ಈ ವಯಸ್ಸಿನಲ್ಲಿ ಪಕ್ಷಾಂತರ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದ ಅವರು, ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಅಪ್ಪ-ಮಕ್ಕಳದ್ದೇ ಕಾರುಬಾರು ಎಂದರು.
ಈಗಾಗಲೇ ಬಂಗಾರಪ್ಪನವರು ಕಾಂಗ್ರೆಸ್ ತ್ಯಜಿಸಿ ಹೊಸ ಪಕ್ಷ ಹುಟ್ಟು ಹಾಕಿದರೂ ಕೂಡ ಯಶಸ್ಸು ಕಂಡಿಲ್ಲ. ಬಿಜೆಪಿ, ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಅದೇ ರೀತಿ ಈಗ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಾಳಯಕ್ಕೆ ಹೋಗುತ್ತಿದ್ದಾರೆ. ಅವರೊಬ್ಬ ಹಿಂದುಳಿದ ನಾಯಕರಾಗಿ ಗುರುತಿಸಿಕೊಂಡವರು. ಬಂಗಾರಪ್ಪನವರಿಗೆ ಈ ಮೊದಲು ಇದ್ದ ಹುಮ್ಮಸ್ಸು, ಬೆಂಬಲ ಈಗ ಇಲ್ಲ. ಆ ನಿಟ್ಟಿನಲ್ಲಿ ಅವರು ಪಕ್ಷಾಂತರ ಮಾಡದೇ ಸುಮ್ಮನಿರುವುದು ಒಳ್ಳೆಯದು ಎಂದು ಕುಮಾರ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಬಂಗಾರಪ್ಪನವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರದಂತೆ ಅವರ ಮನವೊಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ನೀಡಿರುವ ಬೆನ್ನಲ್ಲೇ ತಾನು ಜೆಡಿಎಸ್ ಸೇರುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.