ಬಿಜೆಪಿ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ: ಶರೀಫ್
ರಾಯಚೂರು, ಮಂಗಳವಾರ, 14 ಡಿಸೆಂಬರ್ 2010( 15:53 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಭಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಕೇಂದ್ರದ ಮಾಜಿ ಮಂತ್ರಿ, ಕಾಂಗ್ರೆಸ್ ಹಿರಿಯ ಧುರೀಣ ಸಿ.ಕೆ.ಜಾಫರ್ ಶರೀಫ್ ಆರೋಪಿಸಿದ್ದಾರೆ.
ವೈಯಕ್ತಿಕ ಭೇಟಿ ನಿಮಿತ್ತ ನಗರಕ್ಕೆ ಆಗಮಿಸಿದಾಗ ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದರು. ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಧಿಕಾರ ಕಳೆದುಕೊಂಡರೆ ಮುಖ್ಯಮಂತ್ರಿ ಯಥಾರೀತಿ ಮುಂದುವರಿದಿದ್ದಾರೆ.
ಗಣಿ ಉದ್ಯಮಿಗಳ ಹಣ, ಅಧಿಕಾರ ದುರ್ಬಳಕೆ ಹಾಗೂ ಜಾತಿ ಹೆಸರಿನಲ್ಲಿ ಜನಗಳ ವಿಂಗಡಣೆಯಿಂದ ವಿಲಕ್ಷಣ ಸನ್ನಿವೇಶ ಸೃಷ್ಟಿಯಾಗಿದ್ದು, ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಕುಂದುವ ಭಯ ಉಂಟಾಗಿದೆ.
ರಾಜ್ಯದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಸಮರ್ಥ ಕೆಲಸ ಮಾಡುತ್ತಿದ್ದು, ರಾಜ್ಯಪಾಲರು ಕಳುಹಿಸಿದ ವರದಿ ಒಪ್ಪಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಹಿಂಜರಿಕೆ ಹಾಗೂ ಜನರು ತಪ್ಪಾಗಿ ಗ್ರಹಿಸುತ್ತಾರೆ ಎಂದು ಭಾವಿಸಿದ್ದೇಕೆ ? ಎನ್ನುವುದು ಗೊತ್ತಾಗಿಲ್ಲ.
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಚಿವ ಎ.ರಾಜಾ ರಾಜೀನಾಮೆ ಪಡೆಯುವ ಮೂಲಕ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ, ಕೋಟ್ಯಂತರ ರೂ.ಹಗರಣ ಹೊರ ಬರುತ್ತಿರುವುದು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೋ ಲೋಪವಿದೆ ಎಂಬ ಸಂಶಯ ಉಂಟಾಗುತ್ತಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಕಾನೂನಿಗೆ ಸೂಕ್ತ ತಿದ್ದುಪಡಿ ಅಗತ್ಯವೆಂಬುದು ತಮ್ಮ ಭಾವನೆಯಾಗಿದ್ದು, ಈ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಹಾಗೂ ಆತ್ಮಾವಲೋಕನವಾಗಬೇಕಾಗಿದೆ. ಲೋಕಸಭೆ ಅಧಿವೇಶನದ ಕಲಾಪ ನಡೆಯದೇ ಕೋಟ್ಯಂತರ ರೂ. ಪೋಲಾಗಿದ್ದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಹೊಣೆಯಾಗಿವೆ. ಹಗರಣದ ಜಂಟಿ ಸಂಸದೀಯ ತನಿಖೆಗೆ ಪ್ರತಿಪಕ್ಷ ಬಿಜೆಪಿ ಬಿಗಿಪಟ್ಟು ಹಿಡಿದಿದ್ದರ ಕಾರಣ ಅರ್ಥವಾಗುತ್ತಿಲ್ಲ ಎಂದರು.