ಅಕ್ರಮ ಆಸ್ತಿ ಸಾಬೀತಾದ್ರೆ ಯಾವ ಶಿಕ್ಷೆಗೂ ಸಿದ್ದ: ಕುಮಾರಸ್ವಾಮಿ
ಶಿಕಾರಿಪುರ, ಮಂಗಳವಾರ, 14 ಡಿಸೆಂಬರ್ 2010( 18:35 IST )
ತಾನಾಗಲಿ ತಮ್ಮ ಕುಟುಂಬವಾಗಲಿ ಅಕ್ರಮವಾಗಿ ಆಸ್ತಿಗಳಿಸಿದ್ದು ಸಾಬೀತಾದರೆ ಜನತೆ ಮುಂದೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಬಯಲು ರಂಗಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕಳೆದ ಕೆಲ ದಶಕಗಳಿಂದ ತಮ್ಮ ಕುಟುಂಬ ರಾಜಕಾರಣ ಮಾಡುತ್ತಿದೆ. ಬಡವರ ಹಾಗೂ ರೈತರ ಹಿತದೃಷ್ಟಿಯೇ ಮುಖ್ಯವಾಗಿದೆ. ಈಗಿನ ಮುಖ್ಯಮಂತ್ರಿಯವರು ರೈತರ ಮೇಲೆ ಸುಳ್ಳು ಪ್ರಮಾಣವಚನ ಸ್ವೀಕರಿಸಿ, ರೈತರ ಭೂಮಿಗಳನ್ನು ಅಕ್ರಮವಾಗಿ ಬಳಸುವಂತಹ ಕೆಲಸ ಮಾಡಿಲ್ಲ ಎಂದರು.
ತಾವು ಹಾಸನದಲ್ಲಿ ಅಕ್ರಮವಾಗಿ ಆಸ್ತಿ ಕಬಳಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು, ಅದನ್ನು ಪಂಚಾಯ್ತಿ ಚುನಾವಣೆ ನಂತರ ದಲಿತರಿಗೆ ಹಂಚುವುದಾಗಿ ತಿಳಿಸಿದ್ದಾರೆ. ಅಲ್ಲಿಯ ತನಕ ಯಾಕೆ ಕಾಯಬೇಕು, ನಾಳೆಯೇ ಬನ್ನಿ, ನಿಮ್ಮಿಂದಾಗಿ ದಲಿತರಿಗೆ ಒಂದು ಒಳ್ಳೆಯ ಕೆಲಸವಾದಂತಾಗಲಿ ಎಂದು ಸಲಹೆ ನೀಡಿದರು.
ಶಿಕಾರಿಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳ ಮಂತ್ರ ಶಿರಾಳಕೊಪ್ಪ ರಸ್ತೆಯಲ್ಲಿ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪನವರ ಪ್ರಕಾರ ಅಭಿವೃದ್ಧಿ ಎಂದರೆ ತಮ್ಮ ಇಬ್ಬರ ಮಕ್ಕಳು ಹಾಗೂ ಅಳಿಯನ ಅಭಿವೃದ್ಧಿಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಭಾಗ್ಯಲಕ್ಷ್ಮಿ ಯೋಜನೆಗೆಂದು ಸೂರತ್‌ನಲ್ಲಿ 110 ರೂ.ಗೆ ಸೀರೆ ಖರೀದಿಸಿ, ಅದನ್ನು 210ರೂ.ಗೆ ತಂದಿರುವುದಾಗಿ ಹೇಳುವ ಮೂಲಕ ವಂಚನೆ ಮಾಡಿದ್ದಾರೆ. ಅಲ್ಲದೇ ಈ ಕಳಪೆ ದರ್ಜೆಯ ಸೀರೆಗಳನ್ನು ಕೊಡಲು ಕಾರ್ಯಕ್ರಮಗಳಿಗೆ 80 ಲಕ್ಷ ರೂಪಾಯಿ ವ್ಯಯಿಸಿದ್ದಾರೆ ಎಂದು ಆರೋಪಿಸಿದರು.