ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೈಸೂರು ಬಳಿ ಟೆಂಪೊ ಕೆರೆಗೆ; 29 ಮಂದಿ ಜಲಸಮಾಧಿ (Mysore | Tempo | Rama das | Yeddyurappa | Accient)
Bookmark and Share Feedback Print
 
ಬೀಗರ ಔತಣ ಮುಗಿಸಿ ನಂಜನಗೂಡಿನಿಂದ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಟೆಂಪೊವೊಂದು ದಳವಾಯಿ ಕೆರೆಗೆ ಉರುಳಿದ ಪರಿಣಾಮ ಸುಮಾರು 24 ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ.

ನಂಜನಗೂಡಿನಲ್ಲಿ ಬೀಗರ ಔತಣ ಮುಗಿಸಿ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಮೈಸೂರು-ನಂಜನಗೂಡು ರಸ್ತೆಯ ಸಮೀಪದ ದಳವಾಯಿ ಕೆರೆಗೆ ಟೆಂಪೊ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಟೆಂಪೊದಲ್ಲಿ 33 ಪ್ರಯಾಣಿಕರಿದ್ದು, ಅವರೆಲ್ಲರೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದವರು.

ದುರ್ಘಟನೆಯಲ್ಲಿ ಬಲಿಯಾದವರಲ್ಲಿ 24 ಮಂದಿ ಮಹಿಳೆಯರು. ಉಳಿದಂತೆ ಮೂವರು ಮಕ್ಕಳು ಮತ್ತು ಗಂಡಸರು ಸೇರಿದ್ದಾರೆ. ಸುಮಾರು 28ಕ್ಕೂ ಶವಗಳನ್ನು ಹೊರತೆಗೆಯಲಾಗಿದೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ. ಟೆಂಪೊವನ್ನು ಕೂಡ ಕೆರೆಯಿಂದ ಹೊರಕ್ಕೆ ತೆಗೆಯಲಾಗಿದೆ.

ಟೆಂಪೊ ನೀರಿಗೆ ಬಿದ್ದ ಸಂದರ್ಭದಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಇನ್ನು ಕೆಲವರನ್ನು ರಕ್ಷಿಸಲಾಗಿದೆ. ಒಟ್ಟಾರೆ ದುರಂತದಲ್ಲಿ ಬದುಕುಳಿದವರು ಕೇವಲ ನಾಲ್ಕು ಮಂದಿ. ಅವರನ್ನು ಸಮೀಪದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾವನ್ನಪ್ಪಿದವರನ್ನು ಪ್ರೇಮಮ್ಮ, ಸಣ್ಣ ಗೌರಮ್ಮ, ಬೃಂದಾ, ಜಯಮ್ಮ, ರತ್ನಮ್ಮ, ಲಕ್ಷ್ಮಿ, ವಿನೋದ, ಮಾನಸ, ಗೀತಾ, ರಾಣಿ, ಭಾಗ್ಯ, ಮಹದೇವಪ್ಪ, ನಾರಾಯಣಪ್ಪ, 11 ತಿಂಗಳ ಹಸುಳೆ ಚಿನ್ನು, 3 ವರ್ಷದ ಮಗು ಚಿಂಟು ಎಂದು ಗುರುತಿಸಲಾಗಿದೆ.

ರಮಾಮಣಿ, ವೀಣಾ, ಗಗನ ಮತ್ತು ಭಾರತಿ ಎಂಬವರನ್ನು ರಕ್ಷಿಸಲಾಗಿದೆ.

ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ರಾಮದಾಸ್, ಪೊಲೀಸ್ ವರಿಷ್ಠಾಧಿಕಾರಿ, ಪಾಂಡವಪುರ ಶಾಸಕ ಪುಟ್ಟರಾಜು, ಜಿಲ್ಲಾಧಿಕಾರಿ ತೆರಳಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ.

ರಸ್ತೆ-ಚಾಲಕ ಕಾರಣ...
ಅವಘಢ ಸಂಭವಿಸಿರುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ. ರಸ್ತೆ ಕಾಣಿಸದಷ್ಟು ರಸ್ತೆ ಕೆಟ್ಟು ಹೋಗಿದ್ದರೂ ಇದುವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರತ್ತ ತಿರುಗಿ ನೋಡಿರಲಿಲ್ಲ. ಜತೆಗೆ ಚಾಲಕನ ಅಜಾಗರೂಕತೆಯೂ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಅವಘಢ ನಡೆದ ತಕ್ಷಣ ಕೆರಳಿದ ಸಾರ್ವಜನಿಕರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ರಸ್ತೆ ರಿಪೇರಿ ಮಾಡದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆ ಬೇಗನೆ ಹಾಳಾಗುತ್ತಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಇಂತಹ ಅವಘಢಗಳು ಸಂಭವಿಸುತ್ತವೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮೃತ ಕುಟುಂಬಗಳಿಗೆ 1 ಲಕ್ಷ ರೂ. ಘೋಷಣೆ..
ಟೆಂಪೊ ಕೆರೆಗೆ ಉರುಳಿ ಬಿದ್ದು ಸಾವನ್ನಪ್ಪಿರುವ ಕುಟುಂಬಿಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೇ ಶೋಧ ಕಾರ್ಯ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿ ಹಾಜರಿದ್ದು ಪೂರ್ಣ ವಿವರ ನೀಡುವಂತೆ ಸಚಿವ ರಾಮದಾಸ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ