ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಾಂಗ್ರೆಸ್‌ಗೆ ಕೈ ಕೊಟ್ಟು ಜೆಡಿಎಸ್ ಪಾಳಯಕ್ಕೆ ಜಿಗಿಯಲು ಸಜ್ಜಾಗಿದ್ದರೆ, ಮತ್ತೊಂದೆಡೆ ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ.
ರಾಜ್ಯರಾಜಕೀಯದಲ್ಲಿ ಗುರು-ಶಿಷ್ಯರೆಂದೇ ಬಿಂಬಿತರಾಗಿದ್ದ ಬಂಗಾರಪ್ಪ ಜೆಡಿಎಸ್‌ನತ್ತ ಮುಖ ಮಾಡಿದ್ದು, ಬೇಳೂರು ಕಾಂಗ್ರೆಸ್ ಪಾಳಯಕ್ಕೆ ಸೇರಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಒಂದು ಕಾಲದ ಬದ್ದ ವೈರಿಗಳಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಬೇಳೂರು ಒಟ್ಟಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತಂತೆ ಬೇಳೂರು ಹಾಗೂ ತಿಮ್ಮಪ್ಪ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇಬ್ಬರು ಸೇರಿ ಕ್ಷೇತ್ರದ ಸೀಟು ಹೊಂದಾಣಿಕೆಯ ರಾಜೀಸೂತ್ರ ರೂಪಿಸಿದ್ದಾರೆ.
ಏತನ್ಮಧ್ಯೆ ಬಂಗಾರಪ್ಪ ಅವರನ್ನು ಕಾಂಗ್ರೆಸ್ಸಿನಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಅವರ ಜತೆ ಸಂಧಾನಕ್ಕೆ ಹೋಗಿ ವಿಫಲರಾದ ಕಾಗೋಡು ತಿಮ್ಮಪ್ಪ ಅವರಿಗೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜತೆ ಸೆಣಸಾಡಲು ಬೇಳೂರು ಬೆಂಬಲ ಅಗತ್ಯವಾಗಿತ್ತು. ಆ ನಿಟ್ಟಿನಲ್ಲಿ ಬೇಳೂರು ಹಾಕಿದ ಹೊಂದಾಣಿಕೆಯ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.