ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೈಸೂರು ದುರಂತ; ಸಾವಿನ ಸಂಖ್ಯೆ 31,ಪ್ರಾಣವುಳಿಸಿದ ಸಿನಿಮಾ (Mysore | Mini bus | Undabathi | Kadakola | Congress | Siddaramaiah)
Bookmark and Share Feedback Print
 
ಬೀಗರ ಔತಣ ಮುಗಿಸಿ ನಂಜನಗೂಡಿನಿಂದ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಮಿನಿಬಸ್‌ವೊಂದು ಇಲ್ಲಿಗೆ ಸಮೀಪದ ಕಡಕೋಳ ಸಮೀಪವಿರುವ ಉಂಡಬತ್ತಿಕೆರೆಗೆ ಮಂಗಳವಾರ ಸಂಜೆ ಉರುಳಿ ಬಿದ್ದ ಘಟನೆಯಲ್ಲಿ ಜಲಸಮಾಧಿಯಾಗಿ ಸಾವನ್ನಪ್ಪಿರುವವರ ಸಂಖ್ಯೆ 31ಕ್ಕೆ ಏರಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬೀಗರ ಔತಣ ಮುಗಿಸಿ ಮಂಗಳವಾರ ಸಂಜೆ ಮೈಸೂರಿಗೆ ವಾಪಸಾಗುತ್ತಿದ್ದ ವೇಳೆ ಮಿನಿಬಸ್‌ವೊಂದು ಉಂಡಬತ್ತಿ ಕೆರೆಗೆ ಉರುಳಿ ಬಿದ್ದಿತ್ತು. ಮಿನಿಬಸ್‌ನಲ್ಲಿ 33 ಮಂದಿ ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿಯವರೆಗೂ ಶೋಧ ನಡೆಸಿದ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸುಮಾರು 27 ಶವಗಳನ್ನು ಹೊರ ತೆಗೆದಿದ್ದರು. ಬುಧವಾರ ಬೆಳಿಗ್ಗೆ ಇಬ್ಬರು ಮಹಿಳೆ ಹಾಗೂ ಓರ್ವ ಪುರುಷನ ಶವ ಹೊರತೆಗೆದಿದ್ದಾರೆ. ಒಟ್ಟು ದುರಂತದಲ್ಲಿ 31 ಮಂದಿ ಮಡಿದಿದ್ದಾರೆ. ಮತ್ತೊಂದು ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಮಗು ನಿತ್ಯಾ ಪವಾಡ ಸದೃಶ ಪಾರು: ಕಡಕೋಳ ಮಿನಿಬಸ್ ದುರಂತದಲ್ಲಿ ಐದು ವರ್ಷದ ಮಗು ನಿತ್ಯಾ ಪವಾಡ ಸದೃಶವಾಗಿ ಬದುಕಿ ಉಳಿದಿರುವ ಘಟನೆ ನಡೆದಿದೆ. ಅಮ್ಮ ಆಶಾರಾಣಿ ಮಡಿಲಲ್ಲಿದ್ದ ಮಗು ನಿತ್ಯಾ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಘಟನೆಯಲ್ಲಿ ಮಗುವಿನ ತಾಯಿ ಆಶಾರಾಣಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಕ್ಕಳ ಪ್ರಾಣ ಉಳಿಸಿದ ಕೊಟ್ರೇಶಿ ಕನಸು ಸಿನಿಮಾ; ಮಂಗಳವಾರ ಸಂಜೆ ಸಂಭವಿಸಿದ ಮಿನಿಬಸ್ ದುರಂತದಲ್ಲಿ ಹಲವು ಮಕ್ಕಳ ಪ್ರಾಣ ಉಳಿಸಿದ್ದು ಕೊಟ್ರೇಶಿ ಕನಸು ಸಿನಿಮಾವಂತೆ!. ಬೀಗರ ಔತಣಕೂಟಕ್ಕೆ ಮನೆಯ ಹಿರಿಯರೆಲ್ಲ ತೆರಳಿದ್ದರು. ಆದರೆ ಶಾಲೆಯಲ್ಲಿ ಕೊಟ್ರೇಶಿ ಕನಸು ಸಿನಿಮಾ ಪ್ರದರ್ಶನ ಇದ್ದಿದ್ದರಿಂದ ಹೆಚ್ಚಿನ ಮಕ್ಕಳು ಔತಣಕೂಟಕ್ಕೆ ತೆರಳಲಿಲ್ಲವಾಗಿತ್ತು. ಹಾಗಾಗಿ ಸಿನಿಮಾದಿಂದ ಕೆಲವು ಮಕ್ಕಳ ಪ್ರಾಣ ಉಳಿಯಿತು ಎಂದು ಅರಳಕುಪ್ಪೆ ಗ್ರಾಮದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಅರಳಕುಪ್ಪೆ ಗ್ರಾಮದಲ್ಲಿ ಸ್ಮಶಾನ ಮೌನ: ಮಿನಿಬಸ್ ದುರಂತದಲ್ಲಿ 30ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರುವ ಘಟನೆಯಿಂದ ಅರಳಕುಪ್ಪೆ ಗ್ರಾಮದ ಯಾವ ಮನೆಯವರೂ ಮಂಗಳವಾರ ರಾತ್ರಿ ಊಟಕ್ಕಾಗಿ ಒಲೆಯನ್ನೇ ಹಚ್ಚಿರಲಿಲ್ಲ. ಇಡೀ ಊರು ದುಃಖದ ಮಡಿವಿನಲ್ಲಿತ್ತು.

ಗ್ರಾಮದ ಬೀದಿಗಳ ತುಂಬಾ ಜನ ಗುಂಪು ಸೇರಿ ಅವ್ರು ಹೋಗಿದ್ರು, ಇವ್ರು ಹೋಗಿದ್ರು, ಯಾರು ಸತ್ರೋ ಕಾಣೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೇ ಕೆಳಗಿನ ಬೀದಿಯವರು ಮೇಲಿನ ಬೀದಿಗೆ, ಮೇಲಿನ ಬೀದಿಯವರು ಕೆಳಗಿನ ಬೀದಿಗೆ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಮಂಡ್ಯ ಜಿಲ್ಲೆಯಲ್ಲಿಯೇ ಇದು ದೊಡ್ಡ ದುರಂತ ಎಂದು ನಿವೃತ್ತ ಪ್ರಾಂಶುಪಾಲ ಎಸ್.ನಾಗರಾಜು ತಿಳಿಸಿದ್ದಾರೆ.

ಸಾವಿನ ಶೋಕದಲ್ಲೂ ಕಳ್ಳರ ಕಾಟ; ಒಂದೆಡೆ ಕೆರೆಯಲ್ಲಿ ಮುಳುಗಿದ್ದ ಮಿನಿಬಸ್‌ನಿಂದ ಶವಗಳನ್ನು ಹೊರತೆಗೆದು ಕೂಡಲೇ ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಜನಜಂಗುಳಿ ಇದ್ದ ಈ ಸಂದರ್ಭ ನೋಡಿ ಕೆಲವು ದುಷ್ಕರ್ಮಿಗಳು ಶವದ ಮೇಲಿದ್ದ ಒಡವೆಗಳನ್ನು ದೋಚಲು ಯತ್ನಿಸಿರುವುದಾಗಿ ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಮೃತ ಮಹಿಳೆಯರ ಮೈಮೇಲಿದ್ದ ಒಡವೆಗಳನ್ನೆಲ್ಲಾ ದುಷ್ಕರ್ಮಿಗಳು ದೋಚಿದ್ದಾರೆ ಎಂಬ ಮಾತುಗಳು ಸ್ಥಳದಲ್ಲಿ ಕೇಳಿಬಂದಿದ್ದವು. ಅದೇ ರೀತಿ ಮೃತರ ಸಂಬಂಧಿಕರ ಕಿಸೆಯಿಂದ ದುಷ್ಕರ್ಮಿಯೊಬ್ಬ ಪರ್ಸ್ ಕದಿಯಲು ಹೋಗಿ ಸಿಕ್ಕಿಬಿದ್ದು, ಗೂಸಾ ತಿಂದ ಘಟನೆಯೂ ನಡೆಯಿತು.

ಕಡಕೋಳದಲ್ಲಿ ಗ್ರಾಮಸ್ಥರ ಪ್ರತಿಭಟನೆ, ಲಾಠಿಪ್ರಹಾರ: ಮಿನಿಬಸ್ ದುರಂತಕ್ಕೆ ರಸ್ತೆ ಅವ್ಯವಸ್ಥೆಯೇ ಕಾರಣ ಎಂದು ಆರೋಪಿಸಿ ಕಡಕೋಳ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಆದರೂ ರಸ್ತೆಯನ್ನು ಸಮರ್ಪಕವಾಗಿ ರಿಪೇರಿ ಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾಮೂಹಿಕ ಅಂತ್ಯಸಂಸ್ಕಾರ: ಮಿನಿ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದ ಸುಮಾರು 16 ಮಂದಿ ಶವಸಂಸ್ಕಾರ ಅರಳಕುಪ್ಪೆಯ ಸರಕಾರಿ ಗೋಮಾಳದಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು. ಅದೇ ರೀತಿ ಕಟ್ಟೇರಿಯಲ್ಲಿ ಒಂದೇ ಕುಟುಂಬದ ಆರು ಮಂದಿಯ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಅರಳಕುಪ್ಪೆ ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಸಂಬಂಧಿತ ಮಾಹಿತಿ ಹುಡುಕಿ