ನಗರದಲ್ಲಿ ಡಿ. 23ರಿಂದ ನಡೆಯುವ ಕಲಬುರ್ಗಿ ಕಂಪು ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಎನ್.ಧರಂಸಿಂಗ್ ಆಗ್ರಹಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಡೆಯುವ ಈ ಸಂದರ್ಭದಲ್ಲಿ ಕಂಪು ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಎಂದು ಅವರು ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.
ಈ ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗವಹಿಸಲಿದ್ದಾರೆ. ಚುನಾವಣೆ ವೇಳೆ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಲ್ಲವಾದ್ದರಿಂದ ಅವರು ಇದರಲ್ಲಿ ಭಾಗವಹಿಸಬಾರದು ಎಂದು ಎಂದು ಖರ್ಗೆ ಸಲಹೆ ನೀಡಿದ್ದಾರೆ. ತಾವು ಕಲಬುರ್ಗಿ ಕಂಪು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಅವರು ನುಡಿದಿದ್ದಾರೆ.
ಕಂಪು ಕಾರ್ಯಕ್ರಮ ಸರ್ವ ಜನರ, ರಾಜಕೀಯ ರಹಿತ ಕಾರ್ಯಕ್ರಮ ಎಂದು ಕರೆಯಲಾಗುತ್ತಿದೆ. ಇಂಥ ಕಾರ್ಯಕ್ರಮದಲ್ಲಿ ಕೇವಲ ಒಂದೇ ಒಂದು ಪಕ್ಷದವರು ಭಾಗವಹಿಸಿದರೆ ಅದನ್ನು ರಾಜಕೀಯ ರಹಿತ ಎಂದು ಹೇಳಲಾಗದು, ಇದು ಬಿಜೆಪಿ ಮತ್ತು ಆರ್ಎಸ್ಎಸ್ ವಿಚಾರಧಾರೆಗಳನ್ನು ಜನರ ಮೇಲೆ ಹೇರುವ ಕಾರ್ಯಕ್ರಮವಾಗಿದೆ. ಎಲ್ಲರನ್ನೂ ಕೂಡಿಸಿಕೊಂಡು ಕಾರ್ಯಕ್ರಮ ಮಾಡಬೇಕೆಂಬ ಇಚ್ಛೆ ಸಂಘಟಕರಿಗೆ ಇದ್ದರೆ ಅವರು ಕೂಡಲೇ 23ರಿಂದ ನಡೆಯುವ ಕಾರ್ಯಕ್ರಮ ಮುಂದೂಡಲಿ ಎಂದು ಒತ್ತಾಯಿಸಿದ್ದಾರೆ.