ಶಬರಿಮಲೈ ಯಾತ್ರಾರ್ಥಿಗಳಿಗೂ ಆರ್ಥಿಕ ನೆರವು ಕೊಡಿ: ಮುತಾಲಿಕ್
ದಾವಣಗೆರೆ, ಬುಧವಾರ, 15 ಡಿಸೆಂಬರ್ 2010( 14:56 IST )
ಹಜ್ ಮಾದರಿಯಲ್ಲಿ ಶಬರಿಮಲೈ ಯಾತ್ರಾರ್ಥಿಗಳಿಗೂ ಆರ್ಥಿಕ ನೆರವು ಕಲ್ಪಿಸುವಂತೆ ಶ್ರೀರಾಮ ಸೇನೆ ಒತ್ತಾಯಿಸಿದೆ. ಈ ಸಂಬಂಧ ಡಿ.21 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸುವರು ಎಂದು ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ- ರಾಜ್ಯ ಸರಕಾರಗಳು ಹಜ್ ಯಾತ್ರಿಗಳಿಗೆ ತಲಾ 47 ಸಾವಿರ ರೂ. ನೀಡುತ್ತಿವೆ. ಯಾತ್ರಿಗಳು ತಂಗಲು ಹಜ್ ಭವನವನ್ನೂ ನಿರ್ಮಿಸಿವೆ. ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೈಗೆ ತೆರಳಲು ಪ್ರತಿ ಯಾತ್ರಾರ್ಥಿಗೆ ತಲಾ 5000 ರೂ. ನೆರವು ನೀಡಬೇಕು. ಮಾರ್ಗ ಮಧ್ಯೆ ತಂಗಲು ಪೂರಕವಾಗಿ ಅಲ್ಲಲ್ಲಿ ಅಯ್ಯಪ್ಪ ಸ್ವಾಮಿ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಧಾರ್ಮಿಕ ಉದ್ದೇಶದಿಂದ ಕೇರಳ ಗಡಿ ಪ್ರವೇಶಿಸುವ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಈ ಸಂಬಂಧ ಕೇರಳ ಸರಕಾರದ ಜತೆ ಮಾತುಕತೆ ನಡೆಸಬೇಕು. ಶಬರಿ ಮಲೈ ಯಾತ್ರೆ ವೇಳೆ ಖಾಸಗಿ ವಾಹನಗಳು ದರ ಹೆಚ್ಚಿಸುವ ಕಾರಣ ಪ್ರತಿ ತಾಲೂಕಿನಿಂದ ತಲಾ 10 ಬಸ್ ಸಂಚರಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಭಾರತ ಸರಕಾರದ ನಿಷೇಧದ ನಡುವೆಯೂ ರಾಜ್ಯದಲ್ಲಿ ಪಾಕ್ ಟಿವಿ ಚಾನೆಲ್ ಪ್ರಸಾರವಾಗುತ್ತಿವೆ. 15 ದಿನದೊಳಗೆ ಪ್ರಸಾರ ನಿಷೇಧಿಸದಿದ್ದರೆಶ್ರೀರಾಮ ಸೇನೆ ನೇರ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ಮುತಾಲಿಕ ಎಚ್ಚರಿಸಿದ್ದಾರೆ.