ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿಕಾರಕ್ಕೆ ಬಂದ್ರೆ ಭ್ರಷ್ಟರನ್ನು ಜೈಲಿಗೆ ತಳ್ಳುತ್ತೇವೆ: ಸಿದ್ದರಾಮಯ್ಯ (Siddaramaiah | Yeddyurappa | Shobha | Mysore | Election)
ಅಧಿಕಾರಕ್ಕೆ ಬಂದ್ರೆ ಭ್ರಷ್ಟರನ್ನು ಜೈಲಿಗೆ ತಳ್ಳುತ್ತೇವೆ: ಸಿದ್ದರಾಮಯ್ಯ
ನಂಜನಗೂಡು, ಬುಧವಾರ, 15 ಡಿಸೆಂಬರ್ 2010( 15:02 IST )
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟ ಮಂತ್ರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಟ್ಟಣದ ಯಾತ್ರಿಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರಕಾರದಲ್ಲಿ ಜೈಲಿನಲ್ಲಿರಬೇಕಾದವರೆಲ್ಲಾ ಮಂತ್ರಿಗಳಾಗಿದ್ದಾರೆ. ಅರ್ಧ ಡಜನ್ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಲಂಚ ತಿಂದಿಲ್ಲ ಎಂದು ಹೇಳುವವರಿಗೆ 166 ಎಕರೆ ಕಾಫಿ ತೋಟ ಎಲ್ಲಿಂದ ಬಂತು? ಇದು ಯಾರ ಬಳುವಳಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನೈತಿಕ ಬಲ ಇದೆ, ಹಣ ಬಲ ಇಲ್ಲ. ಬಿಜೆಪಿಯಲ್ಲಿ ನೈತಿಕ ಬಲ ಇಲ್ಲ. ಹಣ ಬಲ ಇದೆ. ಈ ಶಕ್ತಿಯನ್ನೇ ಅಸ್ತ್ರಮಾಡಿಕೊಂಡು ಚುನಾವಣೆಗೆ ಬರುತ್ತಿದ್ದಾರೆ ಎಂದರು. ಮತದಾರರು ಪ್ರಜಾಪ್ರಭುತ್ವವನ್ನು ಉಳಿಸಲು ಭ್ರಷ್ಟ ಸರಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿನ ದುರಾಡಳಿತ, ಭ್ರಷ್ಟ ಸರಕಾರವನ್ನು ಕೊನೆಗಾಣಿಸಲು ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ. ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.