ಐವರು ಪಕ್ಷೇತರ ಶಾಸಕರ ಮೂಲ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿರುವ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಶಾಸಕರಾದ ಡಿ.ಎನ್.ಜೀವರಾಜ್ ಮತ್ತು ಸಿ.ಟಿ.ರವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸುವ ಮೂಲಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇದರಿಂದಾಗಿ ಪಕ್ಷೇತರ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಲ್ತಾಮಸ್ ಕಬೀರ್ ನೇತೃತ್ವದ ಪೀಠ, ಐವರು ಪಕ್ಷೇತರರ ತಿದ್ದುಪಡಿ ಅರ್ಜಿಯನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಪರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ, ಪಕ್ಷೇತರರ ತಿದ್ದುಪಡಿ ಅರ್ಜಿ ವಿಚಾರಣೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ಅನರ್ಹತೆಯನ್ನು ಪ್ರಶ್ನಿಸಿ ಪಕ್ಷೇತರರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಬಿಜೆಪಿ ತೊರೆದಿಲ್ಲ ಎಂಬ ವಾಕ್ಯಕ್ಕೆ ಬದಲು ಎಂದೂ ಬಿಜೆಪಿ ಸೇರಿಲ್ಲ ಎಂಬ ವಾಕ್ಯ ಸೇರಿಸಿದ್ದರು. ಈ ತಿದ್ದುಪಡಿ ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು ಎಂದಿತ್ತು. ಆದರೆ ಪಕ್ಷೇತರರ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಜೀವರಾಜ್, ಸಿ.ಟಿ.ರವಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಜೀವರಾಜ್, ಸಿ.ಟಿ.ರವಿ ಪರ ವಕೀಲರಾದ ಮುಕುಲ್ ರೋಹಟಗಿ ಮತ್ತು ಭೂಪೇಂದರ್ ಯಾದವ್, ತಿದ್ದುಪಡಿಗೆ ಅವಕಾಶ ನೀಡುವುದರಿಂದ ಮೂಲ ಅರ್ಜಿಯ ಸ್ವರೂಪವೇ ಬದಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ಅದೇ ರೀತಿ ಪಕ್ಷೇತರರ ಪರ ವಾದಿಸಿದ ವಕೀಲರಾದ ಪಿ.ಪಿ.ರಾವ್ ಹಾಗೂ ಜಿತೇಂದರ್ ಮಹಾಪಾತ್ರ ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಪ್ರತಿವಾದ ಮಂಡಿಸಿದ್ದರು.