ಜಿ ಕೆಟಗರಿ ಸೈಟ್ ಹಂಚುವ ಅಧಿಕಾರ ಸರಕಾರಕ್ಕಿಲ್ಲ: ಹೈಕೋರ್ಟ್
ಬೆಂಗಳೂರು, ಗುರುವಾರ, 16 ಡಿಸೆಂಬರ್ 2010( 15:27 IST )
ಭೂ ಹಂಚಿಕೆ, ಬಿಡಿಎ, ಕೆಐಎಡಿಬಿ ವಿವಾದ ನಡೆಯುತ್ತಿರುವ ನಡುವೆಯೇ ಜಿ ಕೆಟಗರಿಯಲ್ಲಿ ಸೈಟ್ ಹಂಚುವ ಅಧಿಕಾರ ಸರಕಾರಕ್ಕಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡುವ ಮೂಲಕ ಇನ್ಮುಂದೆ ಮುಖ್ಯಮಂತ್ರಿ ವಿವೇಚನಾ ಕೋಟಾದಲ್ಲಿ ಜಿ ಕೆಟಗರಿಯಲ್ಲಿ ಸೈಟ್ ಹಂಚುವಂತಿಲ್ಲ ಎಂದು ಸೂಚಿಸಿದೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಸರಕಾರ ಹಂಚಿಕೆ ಮಾಡಿದ್ದ ಜಿ ಕೆಟಗರಿ ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ.ಎಸ್.ಅಬ್ದುಲ್ ನಜೀರ್ ಈ ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಸೈಟ್ ಮಂಜೂರು ಮಾಡಲು ಬಿಡಿಎಗೆ ಶಿಫಾರಸು ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ. ಬಿಡಿಎ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಕುಮಾರ ಬಂಗಾರಪ್ಪ ಅವರಿಗೆ 2004ರಲ್ಲಿ ಸರಕಾರ ಬಾಣಸವಾಡಿಯಲ್ಲಿ ಜಿ ಕೆಟಗರಿಯಲ್ಲಿ ನಿವೇಶನ ಮಂಜೂರು ಮಾಡಿತ್ತು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್ಎಸ್ಆರ್ ಲೇಔಟ್‌ನಲ್ಲಿ ಬಿಡಿಎ ನಿವೇಶನ ಮಂಜೂರು ಮಾಡಿತ್ತು. ಮಂಜೂರಾದ ಕೆಲವೇ ದಿನಗಳಲ್ಲಿ ಆ ನಿವೇಶನವನ್ನು ಕುಮಾರ್ ಬಂಗಾರಪ್ಪ 80 ಲಕ್ಷ ರೂಪಾಯಿಗೆ ಮಧು ದೊಂಡಿಬಾ ಎಂಬವರಿಗೆ ಮಾರಾಟ ಮಾಡಿದ್ದರು. ಸುಮಾರು ಐದು ತಿಂಗಳ ಬಳಿಕ ದೊಂಡಿಬಾ ಆ ನಿವೇಶನವನ್ನು ರಾಜು ಎಂಬವರು 1.20 ಕೋಟಿ ರೂ.ಗೆ ಖರೀದಿಸಿದ್ದರು.
ಏತನ್ಮಧ್ಯೆ ಜಿ ಕೆಟಗರಿಯಡಿ ಮಂಜೂರಾದ ಕೆಲವು ನಿವೇಶನಗಳನ್ನು ರದ್ದು ಮಾಡಿ ಬಿಡಿಎ ಆದೇಶ ಹೊರಡಿಸಿತ್ತು. ರದ್ದಾದ ನಿವೇಶನಗಳಲ್ಲಿ ರಾಜು ಅವರ ನಿವೇಶನ ಕೂಡ ಸೇರಿತ್ತು. ಹಾಗಾಗಿ ಬಿಡಿಎ ಆದೇಶ ಪ್ರಶ್ನಿಸಿ ರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.