ರಾಜ್ಯದಲ್ಲಿ ನಡೆಯುವ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯು ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲಿದೆ ಎಂದು ಸಂಸದ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಬಿಜೆಪಿ ವತಿಯಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕೇಂದ್ರ ಯುಪಿಎ ಸರಕಾರದ 2ಜಿ ಸ್ಪೆಕ್ಟ್ರಂ ಹಗರಣ, ಆದರ್ಶ ಸೊಸೈಟಿ, ಕಾಮನ್ವೆಲ್ತ್ ಗೇಮ್ಸ್ ಹಗರಣದಿಂದಾಗಿ ಕಾಂಗ್ರೆಸ್ ವರ್ಚಸ್ಸು ಕುಂದಿದೆ. ಮಿತ್ರಪಕ್ಷಗಳಿಂದಲೂ (ಮಮತಾ ಬ್ಯಾನರ್ಜಿ, ಕರುಣಾನಿ, ಪವಾರ್) ಪ್ರಹಾರ ಎದುರಿಸುತ್ತಿದೆ. ಆಂಧ್ರದಲ್ಲಿ ಕಾಂಗ್ರೆಸ್ ನಿರ್ನಾಮದ ಹಾದಿಯಲ್ಲಿದೆ ಎಂದು ಟೀಕಿಸಿದರು.
ಯುಪಿಎ ಐದು ವರ್ಷ ಪೂರೈಸಲಾಗದೆ, ಮಧ್ಯಂತರ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಬರಲಿದೆ. ಎಡರಂಗವೂ ಅವನತಿ ಹಾದಿಯಲ್ಲಿದೆ. ಆದರೆ ರಾಜ್ಯ ಬಿಜೆಪಿ ಸರಕಾರದ ಮೇಲಿನ ಆರೋಪಕ್ಕೂ ಕೇಂದ್ರದಲ್ಲಿ ನಡೆದ ಹಗರಣಕ್ಕೂ ವ್ಯತ್ಯಾಸವಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯ ಸರಕಾರದ ವಿರುದ್ಧದ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಹಗರಣದಲ್ಲಿ ಮುಳುಗುತ್ತಿರುವ ಸೋನಿಯಾ ಗಾಂಧಿ ರಾಜ್ಯ ಬಿಜೆಪಿ ಸರಕಾರ ವಿರುದ್ಧದ ಹಗರಣ ಆರೋಪವನ್ನೇ ಹುಲ್ಲುಕಡ್ಡಿಯ ಆಶ್ರಯವನ್ನಾಗಿ ಪಡೆದುಕೊಂಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧದ ಆರೋಪವೂ ಸುಳ್ಳಾಗಿದೆ ಎಂದರು.