ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ, ಗುರುವಾರ, 16 ಡಿಸೆಂಬರ್ 2010( 16:35 IST )
ಜಿ.ಪಂ. ಮತ್ತು ತಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸುವ ಮೂಲಕ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಮ್ಮ ಶಕ್ತಿ ಏನೆಂದು ತೋರಿಸುವುದಾಗಿ ಸಾಗರದ ಅನರ್ಹ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು, ಯಾವುದೇ ತಪ್ಪು ಮಾಡದ ನನ್ನನ್ನು ಪಕ್ಷದಿಂದ ಅನರ್ಹಗೊಳಿಸಿರುವ ಯಡಿಯೂರಪ್ಪ ಮತ್ತು ಈಶ್ವರಪ್ಪ ವಿರುದ್ಧ ಪ್ರಚಾರ ನಡೆಸಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವುದಾಗಿ ಸವಾಲು ಹಾಕಿದರು.
ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ತಮ್ಮ ಬೆಂಬಲಿಗರನ್ನು ಜಿ.ಪಂ. ಮತ್ತು ತಾ.ಪಂ. ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಾಗುತ್ತದೆ. ಇದಕ್ಕಾಗಿ ಇನ್ನು 15 ದಿನ ಕ್ಷೇತ್ರದಲ್ಲೇ ಇದ್ದು ವ್ಯಾಪಕ ಪ್ರಚಾರ ಮಾಡುತ್ತೇನೆ. ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂದು ಗುಡುಗಿದರು.
ನಾನೂ ಸೇರಿದಂತೆ ಯಾವುದೇ ತಪ್ಪನ್ನು ಮಾಡದ 17 ಜನರನ್ನು ಅನರ್ಹಗೊಳಿಸಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ನಮ್ಮ ಪರ ತೀರ್ಪು ಬರುವ ನಂಬಿಕೆ ಇದೆ. ಹಾಗಾಗಿ ನಮ್ಮ ಅಭ್ಯರ್ಥಿಗಳು ಯಾರು ಎಂದು ಈಗಲೇ ಹೇಳುವುದಿಲ್ಲ. ಆದರೆ ಅಗತ್ಯ ಕಾರ್ಯತಂತ್ರವನ್ನು ರೂಪಿಸಿ ಬಿಜೆಪಿಗೆ ಮಣ್ಣುಮುಕ್ಕಿಸುವುದಾಗಿ ಹೇಳಿದರು.