ರೈತರಿಗೆ ಆದ್ಯತೆ, ಎಲ್ಲಾ ಗ್ರಾಮಕ್ಕೂ ರಸ್ತೆ; 'ಕೈ' ಪ್ರಣಾಳಿಕೆ
ಬೆಂಗಳೂರು, ಗುರುವಾರ, 16 ಡಿಸೆಂಬರ್ 2010( 17:42 IST )
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ, ರೈತರ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ತಡೆ, ಕೋಮುಸಾಮರಸ್ಯ ಕಾಪಾಡಲು ಗ್ರಾಮ ರಕ್ಷಣಾ ದಳ ರಚನೆ ಮಾಡಿ ಹಳ್ಳಿಗರ ಬದುಕನ್ನು ಹಸನುಗೊಳಿಸುವುದಾಗಿ ಕಾಂಗ್ರೆಸ್ ಗುರುವಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ಜಾತ್ಯತೀತ ನಿಲುವಿನಿಂದ ಸರ್ವ ಸಮಾಜದ ಅಭಿವೃದ್ಧಿಗೆ ದುಡಿಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಗ್ರಾಮೀಣ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತಗೊಳಿಸಿ, ಅದಕ್ಕೆ ಇನ್ನೂ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲಾಗುವುದು. ಫೆಬ್ರುವರಿ 2004ರ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಡೆಸಿದ ಬೇಲೂರು ಸಮಾವೇಶದಲ್ಲಿ ಅಂಗೀಕರಿಸಿರುವ ನಿರ್ಣಯದಂತೆ 29 ಇಲಾಖೆಗಳನ್ನು ಈ ವ್ಯವಸ್ಥೆ ವ್ಯಾಪ್ತಿಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು.
ಎಲ್ಲಾ ಗ್ರಾಮಗಳಿಗೂ ಹಂತ, ಹಂತವಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಕಾಂಗ್ರೆಸ್ ಬದ್ಧವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಶಾನಗಳು ಹಾಗೂ ಅಲ್ಪಸಂಖ್ಯಾತರಿಗೂ ಶವ ಹೂಳಲು ಜಮೀನು ಒದಗಿಸಲು ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ರೈತರ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದ ಅವರು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಸರಕಾರ ರೈತರ ಜಮೀನನ್ನು ವಶಪಡಿಸಿಕೊಂಡು ಮಣ್ಣಿನ ಮಕ್ಕಳನ್ನೇ ಒಕ್ಕಲೆಬ್ಬಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ತಾಲೂಕು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಿದ್ದತೆ, ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ, ಸಿದ್ದು, ಮೋಟಮ್ಮ ಉಪಸ್ಥಿತಿ. ಎಲ್ಲ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣ, ಬಂಜರು ಭೂಮಿ ಅಭಿವೃದ್ದಿ, ರಕ್ಷಣೆಗೆ ಆದ್ಯತೆ, ಸ್ವಸಹಾಯ ಗುಂಪುಗಳಿಗೆ ಬಂಜರು ಭೂಮಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ, ಸಮರ್ಪಕ ರಸಗೊಬ್ಬರ ಪೂರೈಕೆ, ಸಂಧ್ಯಾ ಸುರಕ್ಷೆ ಯೋಜನೆಗೆ ಕಾಯಕಲ್ಪ.ವೃದ್ಧರ ರಕ್ಷಣಾ ಕೇಂದ್ರ ತೆರೆಯಲು ಯೋಜನೆ. ರೈತರ ಓಲೈಕೆ, ಗ್ರಾಮೋದಯದ ಹಂಬಲ ಎಂಬ ಜಯ ಘೋಷದೊಂದಿಗೆ, ಫಲವತ್ತಾದ ಭೂಮಿ ವಶಮಾಡಿಕೊಳ್ಳುವುದನ್ನು ತಡೆಯಬೇಕು.