ಸಚಿವ ಸೋಮಣ್ಣ ಜಾತಿ ರಾಜಕೀಯ ಮಾಡಲು ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಮತ್ತು ಬಿಜೆಪಿಗೆ ನೀಡಿದ್ದ ರಾಜೀನಾಮೆಯನ್ನು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ವಾಪಸ್ ಪಡೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಗುರುವಾರ ತೆರಳಿದ್ದ ಲಕ್ಷ್ಮೀನಾರಾಯಣ, ತಾನು ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡಿರುವುದಾಗಿ ಘೋಷಿಸಿದರು.
ಪಕ್ಷದ ಅಧ್ಯಕ್ಷರು ನೀಡಿದ ಭರವಸೆ ಹಿನ್ನೆಲೆಯಲ್ಲಿ ನಿರ್ಧಾರ ಬದಲಾಯಿಸಿದ್ದೇನೆ. ಉಸ್ತುವಾರಿ ಸಚಿವರಿಂದ ಯಾವುದೇ ರೀತಿಯಲ್ಲೂ ಕಿರಿ ಕಿರಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಮುಂದೆಯೂ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಚಿವ ಸೋಮಣ್ಣ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯಿತ ಸಮುದಾಯದವರಿಗೆ ಆದ್ಯತೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಜಾತಿ ರಾಜಕಾರಣ ಮಾಡಿದವಲ್ಲ. ಹಾಗಾಗಿ ಸೋಮಣ್ಣ ಅವರ ನಿಲುವಿನಿಂದ ಬೇಸತ್ತು ಕೈಮಗ್ಗ ನಿಗಮ ಮತ್ತು ಬಿಜೆಪಿಗೆ ಗುಡ್ ಬೈ ಹೇಳುವುದಾಗಿ ಬುಧವಾರ ಲಕ್ಷ್ಮೀನಾರಾಯಣ ತಿಳಿಸಿದ್ದರು. ನಂತರ ದಿಢೀರನೆ ತಮ್ಮ ನಿಲುವು ಬದಲಾಯಿಸಿದ ಲಕ್ಷ್ಮೀನಾರಾಯಣ ರಾಜೀನಾಮೆ ವಾಪಸ್ ಪಡೆದಿರುವುದಾಗಿ ಪ್ರಕಟಿಸಿದರು.