ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ನಿಜವಾದ ಗಾಂಧಿವಾದಿ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ರಾಜಕೀಯ ಶಿಕ್ಷಣ, ತರಬೇತಿ, ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ನಗರದಲ್ಲಿ ಏರ್ಪಡಿಸಿದ್ದ ದಿ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಜಲಿಂಗಪ್ಪ ಮನಸ್ಸು ಮಾಡಿದ್ದರೆ ದೇಶಕ್ಕೆ ಪ್ರಧಾನಿ ಹಾಗೂ ರಾಷ್ಟ್ರಪತಿಯಾಗಬಹುದಿತ್ತು. ಆದರೆ ಇವ್ಯಾವನ್ನೂ ಬೇಡ ಎಂದು ನಿರಾಕರಿಸಿದ ಮೇರು ವ್ಯಕ್ತಿತ್ವವುಳ್ಳವರು. ಚುನಾವಣೆಯಲ್ಲಿ ಈಗಿನ ರಾಜಕಾರಣಿಗಳು ಸೋತರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಆದರೆ ನಿಜಲಿಂಗಪ್ಪ ಸೋತಾಗಲೂ ಹಸನ್ಮುಕರಾಗಿರುತ್ತಿದ್ದರು. ರಾಜಕೀಯದಲ್ಲಿ ಸೋಲು ಹಗಲು ರಾತ್ರಿ ಇದ್ದಂತೆ ಎನ್ನುತ್ತಿದ್ದರು ಎಂದು ವಿವರಿಸಿದರು.
ಜನಪ್ರತಿನಿಗಳು ತಾವು ರಾಷ್ಟ್ರದ ಸೇವಕರೆಂಬುದನ್ನು ಮರೆತಿದ್ದಾರೆ ಎಂದು ವಿಷಾದಿಸಿದ ಅವರು, ನಿಜಲಿಂಗಪ್ಪ ಯಾವ ಆದರ್ಶಕ್ಕೆ ಹೋರಾಡಿದವರು ಎಂಬುದನ್ನು ಇತರರು ಮೈಗೂಡಿಸಿಕೊಳ್ಳಬೇಕು. ರಾಜಕಾರಣದಲ್ಲಿ ಉಂಟಾಗಿರುವ ಬದಲಾವಣೆ ಗಮನಿಸಿದರೆ ರಾಜಕೀಯ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದರು.