ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬೇಳೂರು ಗೋಪಾಲಕೃಷ್ಣ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಚುನಾವಣೆಯಲ್ಲಿ ತಮ್ಮ ನಿಜವಾದ ತಾಕತ್ತು ತೋರಿಸಲಿ ಎಂದು ಲೋಕಸಭೆ ಸದಸ್ಯ ಹಾಗೂ ರಾಜ್ಯ ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ.
ತಾಕತ್ತಿದ್ದರೆ ನನ್ನನ್ನು ಬಿಜೆಪಿಯಿಂದ ವಜಾಗೊಳಿಸಲಿ ಎಂಬ ಬೇಳೂರು ಸವಾಲಿಗೆ ಪ್ರತಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು, ಅವರಿಗೆ ಮರ್ಯಾದೆ ಇದ್ದರೆ ಕನಿಷ್ಠ ಒಂದಾದರೂ ಜಿ.ಪಂ. ಅಥವಾ ತಾ.ಪಂ. ಕ್ಷೇತ್ರವನ್ನು ಗೆದ್ದು ತೋರಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿ ಎಂದು ಸವಾಲೆಸೆದರು.
ಬೇಳೂರು ಮತ್ತಿತರರನ್ನು ಸೂಕ್ತ ಕಾರಣ ನೀಡಿ ಶಾಸಕ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಪಕ್ಷ ಮತ್ತು ಸ್ಪೀಕರ್ ಅವರ ಈ ಕ್ರಮವನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿದೆ. ಅನರ್ಹರು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರೂ ಸಹ ಸದ್ಯಕ್ಕೆ ಹೈಕೋರ್ಟ್ ತೀರ್ಪು ಜಾರಿಯಲ್ಲಿದೆ. ಇಷ್ಟಾಗಿಯೂ ತಾವಿನ್ನೂ ಬಿಜೆಪಿಯಲ್ಲೇ ಇರುವುದಾಗಿ ಬೇಳೂರು ಭಾವಿಸಿದ್ದರೆ ಅಪ್ರಬುದ್ಧರಂತೆ ಬಾಯಿಗೆ ಬಂದಂತೆ ಬಡಬಡಾಯಿಸುವುದನ್ನು ಬಿಟ್ಟು ಪಕ್ಷದ ತತ್ವಕ್ಕನುಗುಣವಾಗಿ ನಡೆದುಕೊಳ್ಳಲಿ ಎಂದು ಹೇಳಿದರು.
ತಾಕತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೇಳೂರು ಸವಾಲನ್ನು ಸ್ವೀಕರಿಸಲು ಬಿಜೆಪಿ ಸಿದ್ಧ. ಸಂಘಟನೆಯ ಕಾರ್ಯಕರ್ತರು ಇದನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ಆದರೆ ನೀವು ಬೇರೊಬ್ಬರ ಸೆರಗಿನಲ್ಲಿ ಒಳಗೆ ಹೊಕ್ಕಿಕೊಳ್ಳೂವುದು ಬೇಡ. ನಪುಂಸಕ ರಾಜಕಾರಣದ ನಿಲುವೂ ಬೇಡ. ಬದಲಿಗೆ ನಿಮ್ಮ ಸ್ಥಳದಲ್ಲೇ ಬಡಿದಾಡಿ. ನಿಮ್ಮ ಅಭಿಮಾನಿ ಬಳಗದಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಅದಕ್ಕಿಂತ ಮೊದಲು ಜಿಲ್ಲೆಯಲ್ಲಿ ನಿಮ್ಮ ಅಭ್ಯರ್ಥಿಗಳೆಷ್ಟಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.