ದೇಶದ ಯಾವ ರಾಜ್ಯದ ಮುಖ್ಯಮಂತ್ರಿಗಳಿಗೂ ಇಲ್ಲದಷ್ಟು ತಲೆಬಿಸಿ ಇಲ್ಲಿನ ರಾಜಭವನದಿಂದ ಆಗುತ್ತಿದೆ ಎಂದು ವಸತಿ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಡ್ಡಾಗಾಲು ಹಾಕುವ ಸಂಚಿನ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ಪ್ರಶ್ನೆಗೆ ತಾವು ಉತ್ತರಿಸುವುದಿಲ್ಲ ಎಂದರು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೇಂದ್ರ ಸರಕಾರದಲ್ಲಿ ಕಾನೂನು ಸಚಿವರಾಗಿ ಅಪಾರ ಅನುಭವ ಪಡೆದಿದ್ದಾರೆ. ಅವರ ಬಗ್ಗೆ ತಾವು ಮಾತನಾಡುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ತುಮಕೂರು ಜಿಲ್ಲೆಯ 57 ಜಿಪಂ, 212 ತಾಲೂಕು ಪಂಚಾಯ್ತಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಸ್ಥಳೀಯ ಪ್ರಮುಖರು, ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಬಿ ಫಾರಂ ಹಂಚಿಕೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅಲ್ಲದೇ, ಕೈ ಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಮನ ನೋಯುವಂತೆ ಎಂದೂ ನಡೆದುಕೊಂಡಿಲ್ಲ. ನಾವಿಬ್ಬರೂ ಸ್ನೇಹಿತರು. ಆದರೂ ವಿನಾ ಕಾರಣ ಆರೋಪ ಮಾಡಿರುವುದು ತಮ್ಮನ್ನು ಅವಮಾನಿಸಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.