ಹುಬ್ಬಳ್ಳಿ, ಶುಕ್ರವಾರ, 17 ಡಿಸೆಂಬರ್ 2010( 17:56 IST )
ಸಿಬಿಐ ಮೂಲಕ ರೆಡ್ಡಿ ಸಹೋದರರನ್ನು ಟಾರ್ಗೆಟ್ ಮಾಡಿ ನಿರ್ಮಾಮಗೊಳಿಸುವುದೇ ವಿಪಕ್ಷಗಳ ಮುಖ್ಯ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಗದಗ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರೆಡ್ಡಿ ಬ್ರದರ್ಸ್ ಅನ್ನು ಹಣಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೇಂದ್ರದ ಮೇಲೆ ಒತ್ತಡ ಹೇರಿ ಅವರ ಮೇಲೆ ಸಿಬಿಐ ದಾಳಿ ನಡೆಸುತ್ತಿವೆ. ಇದು ರೆಡ್ಡಿ ಬ್ರದರ್ಸ್‌ಗೂ ಗೊತ್ತಿದ್ದ ವಿಚಾರವೇ ಎಂದರು.
ಒಟ್ಟಾರೆ ರೆಡ್ಡಿ ಸಹೋದರರನ್ನು ವಿಪಕ್ಷಗಳು ಸಿಬಿಐ ಮೂಲಕ ಟಾರ್ಗೆಟ್ ಮಾಡಿಕೊಂಡಿದೆ ಎಂದ ಅವರು, ಇದಕ್ಕೆ ಕಾನೂನು ರೀತ್ಯಾ ರೆಡ್ಡಿ ಸಹೋದರರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು. ವಿಪಕ್ಷಗಳ ಈ ಕುತಂತ್ರ ರೆಡ್ಡಿ ಸಹೋದರರಿಗೂ ತಿಳಿದಿದೆ. ನನ್ನ ಹಾಗೂ ರೆಡ್ಡಿ ಸಹೋದರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯಲಿದ್ದು ಅವರ ಸಹಕಾರ ನನಗಿದೆ ಎಂದು ಸ್ಪಷ್ಟಪಡಿಸಿದರು.
ಕೇವಲ ರೆಡ್ಡಿ ಬ್ರದರ್ಸ್ ವಿರುದ್ಧ ಮಾತ್ರ ಅಲ್ಲ ಕಾಂಗ್ರೆಸ್‌ನ ದೇಶಪಾಂಡೆ ಹಾಗೂ ಡಿಕೆಶಿ ಅವರ ಗುಂಪು ನನ್ನ ಮೇಲೂ ರಾಜ್ಯಪಾಲರಿಗೆ ದೂರು ನೀಡಿದೆ ಎಂದು ಆಪಾದಿಸಿದ ಮುಖ್ಯಮಂತ್ರಿಗಳು ಅಭಿವೃದ್ಧಿ ಸಹಿಸದೆ ಈ ರೀತಿ ದೂರು ನೀಡುವುದೇ ಅವರ ಕಾಯಕವಾಗಿದೆ ಎಂದು ವ್ಯಂಗ್ಯವಾಡಿದರು.