ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಆರ್.ವಿ.ದೇಶಪಾಂಡೆ ಅರ್ಧ ಬೆಂಗಳೂರನ್ನು ಕಬಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸುವ ಮೂಲಕ ಭೂ ಹಗರಣದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಬೆಂಗಳೂರು ನಗರದ ಅರ್ಧ ಭೂ ಕಬಳಿಕೆ ಮಾಡಿರುವ ಈ ಮುಖಂಡರಿಗೆ ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವ ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಭೂ ಕಬಳಿಕೆ ಮಾಡಿದ್ದೇನೆ ಎಂದು ರಾಜ್ಯಪಾಲರಿಗೆ ಇವರು ಪತ್ರ ಬರೆದಿದ್ದಾರೆ.
ಈ ಹಿಂದೆ ಬೆಂಗಳೂರಿನ ಕಂಡ, ಕಂಡಲ್ಲಿ ಭೂಮಿ ನುಂಗಿರುವ ಇವರಿಗೆ ನನ್ನ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ತನಿಖೆ ನಡೆದು ವಾಸ್ತವ ಹೊರಬಿದ್ದರೆ ಡಿಕೆಶಿ ಮತ್ತು ದೇಶಪಾಂಡೆ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ. ಅನಗತ್ಯವಾಗಿ ನನ್ನ ವಿರುದ್ಧ ಪತ್ರ ಬರೆದು ಇಬ್ಬರೂ ನಾಯಕರು ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಗ್ಗೆಯೂ ಹರಿಹಾಯ್ದ ಮುಖ್ಯಮಂತ್ರಿ, ಜನತೆಗೆ ಈಗ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂಬ ಜ್ಞಾನೋದಯವಾಯಿತೇ ಎಂದು ವ್ಯಂಗ್ಯವಾಡಿದರು.
ಪ್ರಣಾಳಿಕೆಯಲ್ಲಿ ಗ್ರಾಮೀಣ ಭಾಗದ ಜನತೆಗೆ ಮನೆ ನಿರ್ಮಿಸಿಕೊಡುವುದು, ಟ್ರ್ಯಾಕ್ಟರ್ ಒದಗಿಸುವುದು, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಲಾಗಿದೆ. 60 ವರ್ಷ ಆಡಳಿತ ನಡೆಸಿದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಇಚ್ಛೆ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲವೇ ಎಂದು ಪ್ರಶ್ನಿಸಿದರು.