ಕುಟುಂಬದ ಸದಸ್ಯರಿಂದ ಕೃಷಿ ಜಮೀನು ಖರೀದಿ ಮತ್ತು ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರ ಎಲ್ಲ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಿ ರಾಜ್ಯಪಾಲರು ಬರೆದ ಪತ್ರಕ್ಕೆ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಪಡಿಸಿದ ಯಡಿಯೂರಪ್ಪ ಶೀಘ್ರದಲ್ಲೇ ಉತ್ತರ ನೀಡುವುದಾಗಿ ತಿಳಿಸಿದರು. ರಾಜ್ಯಪಾಲರು ಸರಕಾರಕ್ಕೆ ಬರೆದಿರುವ ಪತ್ರ ತಲುಪಿದೆ. ಚುನಾವಣಾ ಪ್ರವಾಸ ಮುಗಿಸಿದ ಬಳಿಕ ಇನ್ನೆರಡು ದಿನಗಳಲ್ಲಿ ವಿಸ್ತಾರವಾದ ವಿವರಣೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು.
ಇದಕ್ಕೂ ಮೊದಲು ಸರಕಾರದ ವಿರುದ್ಧ ಗುಡುಗಿದ್ದ ರಾಜ್ಯಪಾಲರು, ಸಿಎಂ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಹೇಳಿದ್ದರು.
ನಾನು ಯಾವುದೇ ರಾಜಕೀಯ ದುರುದ್ದೇಶದಿಂದ ಪತ್ರ ಬರೆದಿಲ್ಲ. ಭ್ರಷ್ಟಾಚಾರ ಮತ್ತು ಭೂಹಗರಣಗಳ ಬಗ್ಗೆ ಈ ಹಿಂದೆ ಎರಡು ಬಾರಿ ಎಚ್ಚರಿಕೆ ನೀಡಿದ್ದರೂ, ಭ್ರಷ್ಟಚಾರದಿಂದ ಕುರುಡಾಗಿರುವ ಸರಕಾರ ಈ ಬಗ್ಗೆ ಕಿವಿಗೊಡಲಿಲ್ಲ. ಆದರೆ ಈ ಬಾರಿ ಜಾಣ ಕುರುಡುತನ ಪ್ರದರ್ಶಿಸುವಂತಿಲ್ಲ. ನನ್ನ ಪತ್ರಕ್ಕೆ ಉತ್ತರ ನೀಡಲೇ ಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ನುಡಿದಿದ್ದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇವೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸರಕಾರ ಮೌನ ವಹಿಸುತ್ತಿದೆ ಎಂದು ಸರಕಾರದ ವಿರುದ್ಧ ಭಾರಧ್ವಾಜ್ ಕಿಡಿ ಕಾರಿದ್ದರು.