ಕಾಂಗ್ರೆಸ್, ಬಿಜೆಪಿ ಆಯ್ತು, ಇನ್ನು ಜೆಡಿಎಸ್‌ಗೆ 'ಬೆಂಕಿ'!
ಬೆಂಗಳೂರು, ಶನಿವಾರ, 18 ಡಿಸೆಂಬರ್ 2010( 11:42 IST )
WD
ಬೆಂಕಿಯೀಗ ಒಂದು ಸುತ್ತು ಪಕ್ಷ ಪರ್ಯಟನೆ ನಡೆಸಲು ಹೊರಟಿದ್ದಾರೆ. ಹಿಂದೊಮ್ಮೆ ಜಾತ್ಯತೀತ ಜನತಾ ದಳವನ್ನು ಮರಳುಗಾಡು ಎಂದು ಜರೆದಿದ್ದ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಮಾಜಿ ಸಚಿವ ಬೆಂಕಿ ಮಹದೇವ್, ಇದೀಗ ಅದೇ ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ.
ಇದಕ್ಕೆ ಪುಷ್ಟಿ ನೀಡಿದ್ದು, ಶುಕ್ರವಾರ ಜೆಡಿಎಸ್ ರಾಜ್ಯಾಧ್ಯಕ್ಷ, ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಕಿ ಮಹದೇವ್ ಮನೆಗೆ ಭೇಟಿ ನೀಡಿ, ಜಾ.ದಳ ಸೇರುವಂತೆ ಆಹ್ವಾನಿಸಿದಾಗ. ಆದರೆ ಪಂಚಾಯತ್ ಚುನಾವಣೆಗಳ ಮೊದಲೇ ಜೆಡಿಎಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ದಿನ ಕಾಲಾವಕಾಶ ಬೇಕು. ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಬಿಜೆಪಿ ಬೆಂಬಲಿಗರು ಕರೆ ಮಾಡಿ, ಜೆಡಿಎಸ್ ಸೇರುವುದಿದ್ದರೆ, ನಾವೂ ನಿಮ್ಮ ಜೊತೆ ಬರುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದ ಅವರು, ಜೆಡಿಎಸ್ ಪಕ್ಷವು ಬಿಜೆಪಿಯ ಭೂಹಗರಣಗಳನ್ನು ಬಯಲಿಗೆಳೆಯುತ್ತಾ ಜನಜಾಗೃತಿ ಮೂಡಿಸುತ್ತಿದೆ. ಈ ಹೋರಾಟದಲ್ಲಿ ತಾವು ಕೂಡ ಕುಮಾರ ಜೊತೆ ಕೈಜೋಡಿಸುತ್ತಿರುವುದಾಗಿ ನುಡಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾಗ ಜೆಡಿಎಸ್ ಒಂದು ಮರಗಳುಗಾಡು, ಅಲ್ಲಿಗ್ಯಾಕೆ ಹೋಗಲಿ ಎಂದು ಕೇಳಿದ್ದೀರಲ್ಲಾ ಎಂಬ ಪ್ರಶ್ನೆಗೆ ತಬ್ಬಿಬ್ಬಾದ ಅವರು, ಒಂದು ಕ್ಷಣ ಯೋಚಿಸಿ, ಇದೀಗ ಜೆಡಿಎಸ್ ನೀರಾವರಿ ಭೂಮಿಯಾಗಿ ಮಾರ್ಪಟ್ಟಿದೆ ಎಂದು ನಗುತ್ತಾ ಉತ್ತರಿಸಿ ನುಣುಚಿಕೊಂಡರು.
2008ರ ಚುನಾವಣೆಗಳಿಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಚುನಾವಣೆಗಳಲ್ಲಿ ಸೋಲನುಭವಿಸಿದ್ದ 'ಬೆಂಕಿ'ಗೆ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷಗಿರಿ ಕೊಡಲಾಗಿತ್ತು. ಆದರೆ 2009ರಲ್ಲಿ ಭಿನ್ನಾಭಿಪ್ರಾಯವೆದ್ದು, ಅವರನ್ನು ಆ ಹುದ್ದೆಯಿಂದ ಉಚ್ಚಾಟಿಸಿದಾಗ, ಬಿಜೆಪಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದರು.