ಅಸ್ಸಾಂ ಮೂಲದ ಟೆಕ್ಕೀ ಮಹಿಳೆಯೊಬ್ಬಳು ಜೆ.ಪಿ.ನಗರದ ಗುರು ರಾಘವೇಂದ್ರ ಲೇಔಟ್‌ನ ಲಕ್ಷ್ಮೀನಗರದ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾಗಿ ಬಿದ್ದಿದ್ದಾರೆ. ಈಕೆ ಡೆಲ್ ಸಂಸ್ಥೆಯ ಉದ್ಯೋಗಿ.
29ರ ಹರೆಯದ ಈ ವಿವಾಹಿತ ಮಹಿಳೆ ಪಾಯಲ್ ಸುರೇಖಾಳ ಕೊಲೆಯು ಶುಕ್ರವಾರ ಬೆಳಿಗ್ಗೆ 11 ಗಂಟೆಗೇ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದು, ಸಾಯಂಕಾಲ ನಾಲ್ಕುವರೆ ಸುಮಾರಿಗಷ್ಟೇ ವಿಷಯ ಬೆಳಕಿಗೆ ಬಂದಿದೆ.
ಕಟಕ್‌ಗೆ ತೆರಳಿದ್ದ ಈಕೆಯ ಪತಿ ಅನಂತ ನಾರಾಯಣ ಮಿಶ್ರಾ ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಈಕೆಗೆ ಕರೆ ಮಾಡಿದ್ದರು. ಫೋನ್ ಎತ್ತದೇ ಇರುವುದರಿಂದ, ಆತ ಮರಳಿ ಪ್ರಯತ್ನ ಮಾಡಿದರು. ಆಗಲೂ ಉತ್ತರವಿಲ್ಲದಿದ್ದಾಗ, ಆತ ಅಪಾರ್ಟ್‌ಮೆಂಟ್ ಮಾಲೀಕರಿಗೆ ಫೋನ್ ಮಾಡಿ, ಪತ್ನಿಯು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದರು. ಆಗ ಡುಪ್ಲಿಕೇಟ್ ಕೀ ಬಳಸಿ ಅಪಾರ್ಟ್‌ಮೆಂಟ್ ಮಾಲೀಕರು ಬಾಗಿಲು ತೆಗೆದಾಗ, ಪಾಯಲ್ ಸುರೇಖಾ ಕೊಲೆಯಾಗಿರುವುದು ಬೆಳಕಿಗೆ ಬಂತು ಎನ್ನುತ್ತಾರೆ ಡಿಸಿಪಿ ಸೋನಿಯಾ ನಾರಂಗ್.
ಆದರೆ ಎಸಿಪಿ ಸುನಿಲ್ ಕುಮಾರ್ ಅವರು ಹೇಳುವುದೆಂದರೆ, ಪಾಯಲ್‌ಳನ್ನು ಹುಡುಕಿಕೊಂಡು ಬಂಧುಗಳು ಸಾಯಂಕಾಲ ನಾಲ್ಕುವರೆಗೆ ಮನೆಗೆ ಬಂದಾಗಲಷ್ಟೇ ಕೊಲೆ ವಿಷಯ ಬೆಳಕಿಗೆ ಬಂತು. ಮುಂಬಾಗಿಲು ತೆರೆದಿತ್ತು. ಒಳಗೆ ಹೋದಾಗ ಆಕೆ ಬೆಡ್ ರೂಮಿನಲ್ಲಿ ಸತ್ತು ಬಿದ್ದಿದ್ದಳು ಎಂದಿದ್ದಾರೆ ಅವರು.
ಪಾಯಲ್‌ಳ ಕತ್ತು ಸೀಳಲಾಗಿತ್ತು. ಹೊಟ್ಟೆಯ ಮೇಲೂ ಇರಿತದ ಗಾಯಗಳಿವೆ. ತಕ್ಷಣವೇ ಅವರು ನೆರೆಮನೆಯವರಿಗೆ ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪಾಯಲ್ ಪತಿ ಮೂಲತಃ ಒಡಿಶಾದವರು (ಒರಿಸ್ಸಾ). ಈಕೆ ಡೆಲ್ ಕಂಪನಿಯ ಬಿಪಿಒದಲ್ಲಿ ಉದ್ಯೋಗಿ. ಪತಿ ಒಡಿಶಾದಲ್ಲಿ ಉದ್ಯೋಗಕ್ಕಾಗಿ ತೆರಳಿದ್ದರಿಂದ, ಈಕೆ ಅಪಾರ್ಟ್‌ಮೆಂಟಿನಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಇವರಿಗೆ ಮಕ್ಕಳಿರಲಿಲ್ಲ.
ಆರಂಭಿಕ ಮಾಹಿತಿ ಪ್ರಕಾರ, ಆಸ್ತಿ ಅಥವಾ ಹಣಕ್ಕಾಗಿ ಇಲ್ಲವೇ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಸಾಧ್ಯತೆಗಳಿಲ್ಲ ಎಂದಿದ್ದಾರೆ ಸುನಿಲ್ ಕುಮಾರ್. ತನಿಖೆ ಮುಂದುವರಿದಿದೆ.
ಒಂಟಿ ಮಹಿಳೆಯರು ನಗರದಲ್ಲಿ ಸುರಕ್ಷಿತವಲ್ಲ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ.