ಮೊದಲ ಹಂತದ 15 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಾಸ್ ಪಡೆಯುವ ಕಾರ್ಯ ಮುಕ್ತಾಯಗೊಂಡಿದ್ದು, ಎಲ್ಲ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಸ್ವತಂತ್ರವಾಗಿ ಸ್ಪರ್ಧಿಸಿದ್ದ ಹಾಗೂ ಬಂಡಾಯವೆದ್ದಿದ್ದ ಹಲವು ಉಮೇದುದಾರರ ಮನವೊಳಿಸಲು ಪಕ್ಷಗಳು ಯಶಸ್ವಿಯಾಗಿದ್ದು, 15 ಜಿಲ್ಲೆಗಳಲ್ಲಿ ನೂರಾರು ನಾಮಪತ್ರ ಹಿಂಪಡೆಯಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ಕೋಲಾರ ಸೇರಿದಂತೆ 15 ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಡಿಸೆಂಬರ್ 26ರಂದು ಚುನಾವಣೆ ನಡೆಯುತ್ತಿದೆ.
ಸ್ಥಳೀಯ ಚುನಾವಣೆ ರಾಜ್ಯ ರಾಜಕೀಯದಲ್ಲಿ ಬಾರಿ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ನಾಮಪತ್ರ ವಾಪಸ್ ಪಡೆಯುವ ಗಡುವು ಮುಗಿಯುತ್ತಿದ್ದಂತೆಯೇ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರ ಬಿದ್ದಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ 997 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, 176 ತಾಲೂಕಗಳಲ್ಲಿ 3659 ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.