ರೆಡ್ಡಿ ಬ್ರದರ್ಸ್ ವ್ಯವಹಾರ ಮತ್ತು ಭೂ ಹಗರಣದ ಬಗ್ಗೆ ಸ್ಪಷ್ಟನೆ ಕೇಳಿ ರಾಜ್ಯಪಾಲರು ಬರೆದ ಪತ್ರಕ್ಕೆ ಎರಡು ಪ್ರತ್ಯೇಕ ಪತ್ರಗಳ ಮೂಲಕ ಉತ್ತರ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಹೇಳಿದ್ದಾರೆ.
ಕುಟುಂಬದ ಸದಸ್ಯರಿಂದ ಕೃಷಿ ಜಮೀನು ಖರೀದಿ ಮತ್ತು ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರ ಎಲ್ಲ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಿ ಗುರುವಾರದಂದು ರಾಜ್ಯಪಾಲರು ಸಿಎಂಗೆ ಪತ್ರ ಬರೆದಿದ್ದರು. ಅಲ್ಲದೆ ಈ ವಿಷಯದಲ್ಲಿ ಸಿಎಂ ಜಾಣ ಕುರುಡುತನ ಪ್ರದರ್ಶಿಸುವಂತಿಲ್ಲ. ನನ್ನ ಪತ್ರಕ್ಕೆ ಉತ್ತರ ನೀಡಲೇ ಬೇಕು ಎಂದು ತಾಕೀತು ನೀಡಿದ್ದರು.
ಆನಂತರ ಎರಡು ದಿಗಳಲ್ಲಿ ಉತ್ತರ ನೀಡುವುದಾಗಿ ತಿಳಿಸಿದ್ದ ಯಡ್ಡಿ, ಭಾನುವಾರ ರಾಜ್ಯಪಾಲರಿಗೆ ವಿವರವಾದ ಉತ್ತರ ರವಾನಿಸಿದ್ದಾರೆ. ಭೂ ಹಗರಣದ ಬಗ್ಗೆ ಎದ್ದಿರುವ ಎಲ್ಲ ಆರೋಪಗಳು ನಿರಾಧಾರ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಪದ್ಮರಾಜ್ ಆಯೋಗದ ತನಿಖೆ ನಡೆದಿದೆ. ವರದಿ ನಂತರ ಸತ್ಯಾಂಶ ಬಯಲಾಗಲಿದೆ. ರೆಡ್ಡಿ ವ್ಯವಹಾರಕ್ಕೂ ಸರಕಾರಕ್ಕೂ ಯಾವುದೇ ಸಂಬಂಧಿವಿಲ್ಲ. ರೆಡ್ಡಿ ಬ್ರದರ್ಸ್ ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸ್ತಿಲ್ಲ. ಹಾಗೆಯೇ ತೆರಿಗೆ ಪಾವತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ತನ್ನ ಹಿಂದಿನ ನಿಲುವನ್ನು ಯಡ್ಡಿ ಸಮರ್ಥಿಸಿಕೊಂಡತಾಂಗಿದೆ. ತನ್ನ ಕುಟುಂಬದ ವಿರುದ್ಧ ಬಂದಿರುವ ಆರೋಪವು ನಿರಾಧಾರ ಎಂದು ಉತ್ತರ ನೀಡಿದ್ದಾರೆ.