ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಬಿಜೆಪಿ ಕೇಸರೀಕಣ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.
ರಸ್ತೆ ತುಂಬಾ ಕೆಸರಿ ಬಾವುಟ ಕಟ್ಟಿ ಚುನಾವಣೆ ಸಂದರ್ಭದಲ್ಲಿ ಭಾರಿ ಮೊತ್ತ ಖರ್ಚು ಮಾಡಿ ಸಮಾಜೋತ್ಸವ ಮಾಡುತ್ತಿದ್ದಾರೆ. ಚುನಾವಣೆ ಬಂದ ತಕ್ಷಣ ಇವರಿಗೆ ಹಿಂದುತ್ವ ಎಂಬ ಭಾವನೆ ಉಕ್ಕಿ ಬರುತ್ತದೆ ಎಂದವರು ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮತ್ತು ಇತರ ಸಚಿವರ ಬಗ್ಗೆಯೂ ಗೌಡ ಕಿಡಿ ಕಾರಿದ್ದಾರೆ. ರಾಜ್ಯಪಾಲರಿಗೆ ರಾಜ್ಯಾಂಗದಲ್ಲಿ ಸಾಕಷ್ಟು ಅನುಭವ ಇದೆ. ಅಂದ ಹಾಗೆ ಅವರ ಬಗ್ಗೆಯೇ ಟೀಕೆ ಮಾಡುವುದು ಎಂದರೆ ಇಂತಹರವನ್ನು ಬಾಯಿ ಮುಚ್ಚಿಸುವುದು ಯಾರು ಎಂದು ಪ್ರಶ್ನಿಸಿದರು.
ಏನೇ ಮಾತನಾಡಿದರೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಇತಿ ಮಿತಿಯಲ್ಲಿರುವುದು ಒಳಿತು ಎಂದು ಬಿಜೆಪಿ ನಾಯಕರಿಗೆ ಸಲಹೆ ಮಾಡಿದರು.
ರಾಜ್ಯ ಬಿಜೆಪಿ ಸರಕಾರದ ವಿರುದ್ಧವೂ ಗುಡಿಗಿದ ಗೌಡರು, ಯಡ್ಡಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಆಪಾದಿಸಿದರು. ರಾಜ್ಯ ಸರಕಾರದ ಎಲ್ಲ ಹಗರಣಗಳೂ ಜನತೆಗೆ ತಿಳಿದಿದೆ ಎಂದಿದ್ದಾರೆ.