ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ ನಿಲ್ಲಿಸಲು ಕೇಂದ್ರಕ್ಕೆ ಸೂಚಿಸಿ: ರಾಜ್ಯಪಾಲರಿಗೆ ಸಿಎಂ
(Yaddyurappa | Governor | Illegal Mining | Land Scam | Karnataka)
ಅಕ್ರಮ ಗಣಿ ನಿಲ್ಲಿಸಲು ಕೇಂದ್ರಕ್ಕೆ ಸೂಚಿಸಿ: ರಾಜ್ಯಪಾಲರಿಗೆ ಸಿಎಂ
ಬೆಂಗಳೂರು, ಸೋಮವಾರ, 20 ಡಿಸೆಂಬರ್ 2010( 10:45 IST )
ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಪತ್ರ ಸಮರ ಮತ್ತೊಂದು ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಂಸರಾಜ್ ಭಾರದ್ವಾಜ್ ಅವರ ಪತ್ರಕ್ಕೆ ಬರೆದಿರುವ ಉತ್ತರದಲ್ಲಿ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರಲ್ಲದೆ, ಕೇಂದ್ರ ಸರಕಾರವು ಇಡೀ ದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿಬಿಡಿ ಎಂದು ಆಗ್ರಹಿಸಿದ್ದಾರೆ.
ಗುರುವಾರ ರಾಜ್ಯಪಾಲರು ಬರೆದಿರುವ ಎರಡು ಪತ್ರಗಳಿಗೆ ಉತ್ತರಿಸಿರುವ ಯಡಿಯೂರಪ್ಪ, ಪತ್ರದ ಬಾಣವನ್ನು ರಾಜ್ಯಪಾಲರತ್ತಲೇ ತಿರುಗಿಸಿ, ದೇಶಾದ್ಯಂತ ವಿವಿಧೆಡೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯಬೇಕೆಂದು ಕೇಂದ್ರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯಪಾಲರು ತಮ್ಮ ಪತ್ರದಲ್ಲಿ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಆಂಧ್ರದಲ್ಲಿ ಮಾಡಿದಂತೆ ಇಲ್ಲೂ ಏಕೆ ಈ ಬಗ್ಗೆ ಸಿಬಿಐಯಿಂದ ತನಿಖೆ ನಡೆಸಬಾರದು ಮತ್ತು ಮುಖ್ಯಮಂತ್ರಿ ಕುಟುಂಬಿಕರನ್ನು ಒಳಗೊಂಡಿರುವ ಭೂಹಗರಣ ಆರೋಪಗಳ ಕುರಿತು ಸವಿವರವಾದ ವರದಿ ನೀಡುವಂತೆ ಕೇಳಿದ್ದರು.
ಮುಖ್ಯಮಂತ್ರಿಯು ತಮ್ಮ ಉತ್ತರದಲ್ಲಿ, ಈಗಾಗಲೇ ಅಕ್ರಮ ಗಣಿಗಾರಿಕೆಯಾಗುತ್ತಿದ್ದರೆ, ಅದನ್ನು ತಡೆಯಲೆಂದೇ ಅದಿರು ರಫ್ತು ನಿಷೇಧಿಸಲಾಗಿದೆ. ಚೆಕ್ ಪೋಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರಲ್ಲದೆ, ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ನಿರಾಕರಿಸುತ್ತಾ, ರೆಡ್ಡಿ ಆಂಧ್ರದಲ್ಲೂ ಗಣಿಯ ಒಡೆತನ ಹೊಂದಿದ್ದಾರೆ, ಹೀಗಾಗಿ ಅಲ್ಲಿನ ಸಿಬಿಐ ತನಿಖೆಯ ವ್ಯಾಪ್ತಿಯಲ್ಲೇ ಅದು ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಮತ್ತು ಭೂಹಗರಣ ಎಂಬುದೆಲ್ಲಾ ರಾಜ್ಯದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎಬ್ಬಿಸಿದ ಹುಯಿಲುಗಳು. ಅವುಗಳ ಬಗ್ಗೆ ರಾಜ್ಯಪಾಲರು ಪ್ರಶ್ನೆಗಳನ್ನು ಕೇಳಿದ್ದಾರೆ. ನಾನು ಎರಡು ಪತ್ರಗಳಲ್ಲಿ ಉತ್ತರಿಸಿದ್ದೇನೆ. ಪ್ರತಿಪಕ್ಷಗಳ ಆಧಾರರಹಿತ ಆರೋಪಗಳನ್ನು ಎತ್ತಿ ತೋರಿಸುತ್ತಾ, ಜನರನ್ನು ತಪ್ಪು ದಾರಿಗೆಳೆಯಬೇಡಿ ಎಂದು ರಾಜ್ಯಪಾಲರನ್ನು ಕೋರಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳು ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಕಂಡುಕೊಂಡಿವೆ. ಈ ಎಲ್ಲಾ ವಿಷಯಗಳನ್ನು ಅರಿತುಕೊಂಡು ಭಾರದ್ವಾಜ್ ಅವರು ಪರಿಸ್ಥಿತಿ ಅರ್ಥೈಸಿಕೊಳ್ಳುತ್ತಾರೆಂಬ ವಿಶ್ವಾಸ ತಮಗಿದೆ ಎಂದೂ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.