ಹಿಂದೂ ಸಂಘಟನೆಗಳು ಲಷ್ಕರ್ ಇ ತೊಯ್ಬಾಗಿಂತ ಅಪಾಯಕಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇಶಾದ್ಯಂತ ರಾಹುಲ್ ಹಠಾವೋ ಎಂಬ ಚಳವಳಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದೇಶಭಕ್ತ ಸಂಘಟನೆಗಳ ವಿರುದ್ಧವೇ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಹಾಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಡೆದ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ರಾಹುಲ್ ಹಠಾವೋ ಚಳವಳಿ ನಡೆಸಲಾಗುವುದು. ಇದು ದೇಶಾದ್ಯಂತ ನಡೆಯಲಿದೆ ಎಂದು ಹೇಳಿದರು.
ಹಿಂದೂ ಸಂಘಟನೆಗಳ ಇತಿಹಾಸದ ಕಲ್ಪನೆ ಅವರಿಗಿಲ್ಲ. ಇದು ಹದ್ದುಮೀರಿದ ವರ್ತನೆ. ಯಾವ ಭಾರತೀಯರೂ ರಾಹುಲ್ ಹೇಳಿಕೆಯನ್ನು ಸಹಿಸಬಾರದು. ಸಮಾಜದಲ್ಲಿ ವಿಷಬೀಜ ಬಿತ್ತುವ ಇಂತಹ ಷಡ್ಯಂತ್ರವನ್ನು ವಿರೋಧಿಸಬೇಕು ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಅವರು ಇಲ್ಲಿಯ ಆರ್ಎಸ್ಎಸ್ ಕಚೇರಿ ಸಂಘ ನಿಕೇತನದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರದ ಸಾಧನೆಗಳನ್ನು ಸಹಿಸಲು ಸಾಧ್ಯವಾಗದ ವಿರೋಧ ಪಕ್ಷಗಳು ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು, ನಿಮ್ಮ ಬಳಿ ಏನೇನು ದಾಖಲೆಗಳಿವೆಯೋ ಆ ಬಗ್ಗೆ ಚಾರ್ಜ್‌ಶೀಟ್ ಸಿದ್ದಪಡಿಸಿ ಜನರಿಗೆ ತಿಳಿಸಿ. ಈ ಚುನಾವಣೆಯಲ್ಲಿ ಜನರ ತೀರ್ಮಾನ ಏನಾಗುತ್ತದೆಯೋ ನೋಡೋಣ ಎಂದು ಸವಾಲು ಹಾಕಿದರು.