'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಂತಚೋರ ವೀರಪ್ಪನ್ ಇದ್ದಂತೆ. ವೀರಪ್ಪನ್‌ಗೆ ಲೂಟಿ ಮಾಡಲು ಲೈಸೆನ್ಸ್ ಇರಲಿಲ್ಲವಾಗಿತ್ತು. ಆದರೆ ಯಡಿಯೂರಪ್ಪ ಲೈಸೆನ್ಸ್ ಪಡೆದು ರಾಜ್ಯದ ಲೂಟಿ ಹೊಡೆಯುತ್ತಿದ್ದಾರೆ' ಎಂದು ಬಿಜೆಪಿಗೆ ಗುಡ್ ಬೈ ಹೇಳಿರುವ ಬೆಂಕಿ ಮಹದೇವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಕಲ್ಯಾಣಮಂಟಪವೊಂದರಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ನಂತರ ಮಾತನಾಡಿದ ಮಹದೇವು ಅವರು, ಯಡಿಯೂರಪ್ಪ ಅವರು ಸಮುದಾಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಆತ್ಮಗೌರವಕ್ಕೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ತಮ್ಮ ಮಾತಿನುದ್ದಕ್ಕೂ ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಅವರು ಪರವಾನಿಗೆ ಪಡೆದ ಡಕಾಯಿತ. ಇಡೀ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆದರೂ ಎಲ್ಲರನ್ನೂ ಸಮರ್ಥಿಸಿಕೊಂಡು ಲೂಟಿ ಮಾಡಲು ತೊಡಗಿದ್ದಾರೆ. ಹಾಗಾಗಿಯೇ ರಾಜ್ಯದ ಇಂದಿನ ದುಸ್ಥಿತಿಗೆ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಆರೋಪಿಸಿದರು.