ಸಾಹಿತ್ಯ ಲೋಕಕ್ಕೆ ಹೈದರಾಬಾದ್-ಕರ್ನಾಟಕ ಭಾಗದವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಚಂದ್ರಶೇಖರ ಪಾಟೀಲ್ ಹೇಳಿದರು.
ನಗರದ ಕಲ್ಯಾಣ ಮಂಟವೊಂದರಲ್ಲಿ ನಡೆದ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 34ನೇ ವಾರ್ಷಿಕೋತ್ಸವ ಹಾಗೂ ಅಂತರಜಾಲ ಉದ್ಘಾಟನಾ ಸಮಾರಂಭದ ನಿಮಿತ್ತ ಪ್ರಕಟಿಸಿದ 81ನೇ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ರಕಾಶನ ಸೇರಿದಂತೆ ಈ ನೆಲದಿಂದ ಬಂದ ಕವಿತೆ, ಕಾದಂಬರಿ, ಲಲಿತ ಪ್ರಬಂಧಗಳು ಮಾದರಿಯಾಗಿವೆ. ಈ ಭಾಗದ ಜನರಲ್ಲಿ ಪ್ರತಿಭೆ, ಸಾಮರ್ಥ್ಯ ಇದೆ. ಆದರೆ ಅವಕಾಶ ಸಿಗುತ್ತಿಲ್ಲ. ಮೈಸೂರು, ಬೆಂಗಳೂರು ಭಾಗದವರು ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಉತ್ತರ ಕರ್ನಾಟಕ ಹೆಸರಿನಲ್ಲಿ ಎಲ್ಲವೂ ಧಾರವಾಡದವರೆ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದಾಗಿಯೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಅದನ್ನು ಹೋಗಲಾಡಿಸಲು ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಇತ್ತಿಚೆಗೆ ಬಯಲಿಗೆ ಬಂದ ಹಗರಣಗಳಲ್ಲಿ ಬುದ್ದಿವಂತರು ಎನಿಸಿಕೊಂಡವರು ಪಾಲ್ಗೊಂಡಿರುವುದು ಖೇದಕರ ಎಂದರು. ಈಗಿನದು ಮೊದಲಿನ ಗುಲ್ಬರ್ಗ ಅಲ್ಲ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ. ಹೀಗಾಗಿ ರಾಜ್ಯದ ನಾಲ್ಕನೇ ಸಾಂಸ್ಕೃತಿಕ ನಗರಿಯಾಗಿ ಇದು ಬೆಳೆಯುತ್ತಿದೆ ಎಂದು ಚಂಪಾ ಹೇಳಿದರು.