ಧರಂಸಿಂಗ್ ದರ್ಪದ ರಾಜಕೀಯ ಮಾಡ್ತಿದ್ದಾರೆ: ಬಸವರಾಜ್ ಪಾಟೀಲ್
ಬೀದರ್, ಸೋಮವಾರ, 20 ಡಿಸೆಂಬರ್ 2010( 19:13 IST )
ಸಂಸದ ಧರಂಸಿಂಗ್ ಅವರಿಗೆ ಭ್ರಮ ನಿರಸನವಾಗಿದ್ದು, ನಿತ್ಯ ಇಲ್ಲದೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಹುಮನಾಬಾದ್ ಗುಡುಗಿದ್ದಾರೆ.
ಧರಂಸಿಂಗ್ ಅವರು ದರ್ಪದ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ಎರಡು ಚುನಾವಣೆಗಳಲ್ಲಿ ಅವರಿಗೆ ತಕ್ಕ ಪಾಠ ಆಗಿದೆ. ಆದರೂ ತಾವು ಏನು ಮಾಡಿದರೂ ನಡೆಯುತ್ತದೆ, ನಾನು ಟಿಕೆಟ್ ಕೊಟ್ಟವರು ಗೆಲ್ಲುತ್ತಾರೆ ಎಂಬ ಭ್ರಮೆಯಲ್ಲಿ ಅಹಂಕಾರದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಆಗಿದ್ದಾಗ ನನಗೆ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ್ದರು ಎಂದು ಧರಂಸಿಂಗ್ ಹೇಳಿರುವುದು ಹಾಸ್ಯಾಸ್ಪದ. 2004ರಲ್ಲಿ ಅವರು ಮುಖ್ಯಮಂತ್ರಿ ಇದ್ದರು. ಆಗಲೇ ನಾನು ಪರಿಷತ್ ಸದಸ್ಯನಾಗಿದ್ದೆ. ಅವರು ನನಗೇನೂ ಮಾಡಿಲ್ಲ. ಕಾಜಿ ಅರ್ಷದ್ ಅಲಿ ಅವರಿಗೆ ಎರಡು ಸಲ ಎಂಎಲ್‌ಸಿ ಮಾಡಿರುವುದು ಬಿಟ್ಟರೆ ಬೇರ್ಯಾರಿಗೆ ಏನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
1997ರಲ್ಲಿ ಧರ್ಮಸಿಂಗ್ ಕೆಪಿಸಿಸಿ ಅಧ್ಯಕ್ಷರಿದ್ದಾಗ ಗೆಲ್ಲುವ ಅಭ್ಯರ್ಥಿಗೆ ಎಂಎಲ್ಸಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಆಗ ಬಿ.ನಾರಾಯಣರಾವ್ ಅವರ ಹೆಸರಿಗೆ ಬಿ.ಫಾರ್ಮ್ ಬರೆದುಕೊಡಲಾಗಿತ್ತು. ನಂತರ ಧರಂ, ಖರ್ಗೆಯವರು ಬಿ.ನಾರಾಯಣರಾವ್ ಗೆಲ್ಲಲು ಅವಕಾಶಗಳಿಲ್ಲ ಎಂದು ಹೇಳಿ ನನ್ನ ದುಂಬಾಲು ಬಿದ್ದರು. ತಮ್ಮ ಬೆಂಬಲಿಗರಿಂದ ನನ್ನ ಮನವೊಲಿಸಿ ನಿಲ್ಲಿಸಿದರು. ಬಿ. ಫಾರ್ಮ್ ಕೊಟ್ಟ ಮಾತ್ರಕ್ಕೆ ಅವರೇನು ನನ್ನ ಗೆಲ್ಲಿಸಿಲ್ಲ. ಕ್ಷೇತ್ರದ ಮತದಾರರ ಆಶಿರ್ವಾದದಿಂದ ನಾನು ಗೆದ್ದಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.