ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉತ್ತರ ಸಮಾಧಾನ ತಂದಿಲ್ಲ. ಹಾಗಾಗಿ ಸ್ಪಷ್ಟ ಉತ್ತರಕ್ಕಾಗಿ ಮತ್ತೆ ಪತ್ರ ಬರೆಯುವುದಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳುವ ಮೂಲಕ ಪತ್ರ ಸಮರ ಮುಂದುವರಿದಂತಾಗಿದೆ.
ನನ್ನ ಪತ್ರಗಳಿಗೆ ಸರಕಾರ ನೀಡಿರುವ ಉತ್ತರ ಸಮಾಧಾನ ತಂದಿಲ್ಲ. ಒಂದೆಡೆ ಅಕ್ರಮ ಗಣಿಗಾರಿಕೆ ನಡೆದಿಲ್ಲ ಅಂತಾರೆ. ಆದರೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೋಟಿ, ಕೋಟಿ ಲೂಟಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆ ನಿಟ್ಟಿನಲ್ಲಿ ನಾನು ರಾಜ್ಯದ ರಾಜ್ಯಪಾಲನಾಗಿ ಉತ್ಸವ ಮೂರ್ತಿಯಂತಿರಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಬಗ್ಗೆ ಏನು ಬೇಕಾದರೂ ಟೀಕಿಸಲಿ, ಆ ಬಗ್ಗೆ ತಲೆಕೆಡಿಕೊಳ್ಳುವುದಿಲ್ಲ ಎಂದು ರಾಜ್ಯಪಾಲರು ತಿರುಗೇಟು ನೀಡಿದ್ದಾರೆ.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಪತ್ರಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರದಲ್ಲಿ, ಭೂಮಿಯ ಡಿನೋಟಿಫಿಕೇಷನ್ ಪ್ರಕ್ರಿಯೆಯಲ್ಲಿ ತಾವು ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಅದೇ ರೀತಿ ಮತ್ತೊಂದು ಪತ್ರದಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧದ ಅಕ್ರಮ ಗಣಿಗಾರಿಕೆ ಆರೋಪವನ್ನೂ ತಳ್ಳಿಹಾಕಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪ ಮತ್ತು ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧದ ಅಕ್ರಮ ಗಣಿಗಾರಿಕೆ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ರಾಜ್ಯಪಾಲರು ಡಿಸೆಂಬರ್ 15ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಆದರೆ ಪತ್ರಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು, ಭೂ ಹಗರಣ ಮತ್ತು ಅಕ್ರಮ ಗಣಿಗಾರಿಕೆ ಆರೋಪವನ್ನು ತಳ್ಳಿಹಾಕಿದ್ದರು. ಹಾಗಾಗಿ ಮುಖ್ಯಮಂತ್ರಿಗಳ ಅಸಮರ್ಪಕ ಉತ್ತರದಿಂದ ರಾಜ್ಯಪಾಲರು ಮತ್ತೆ ಗರಂ ಆಗಿದ್ದಾರೆ. ಇದರಿಂದಾಗಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಜಂಗೀಕುಸ್ತಿ ಮುಂದುವರಿದಿದೆ.