ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣಾ ಅಖಾಡ ರಂಗೇರತೊಡಗಿದ್ದು, ಮಾಜಿ ಶಾಸಕರು, ಶಾಸಕಿ, ಮಾಜಿ ರೌಡಿ ಸೇರಿದಂತೆ ಘಟಾನುಘಟಿಗಳೆಲ್ಲ ಸ್ಪರ್ಧೆಗಿಳಿದಿದ್ದಾರೆ.
ಮಾಜಿ ಶಾಸಕ ಲಕ್ಕಪ್ಪ ಎಂಬವರು ಚಿಕ್ಕನಾಯಕನಹಳ್ಳಿಯ ಶೆಟ್ಟಿಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಲಕ್ಕಪ್ಪ ಅವರು 1985ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಜಿಲ್ಲಾ ಪಂಚಾಯ್ತಿ ಚುನಾವಣೆಯತ್ತ ಮುಖ ಮಾಡಿರುವ ಅವರು ಅಖಾಡಕ್ಕಿಳಿದಿದ್ದಾರೆ. ತಾನು ಹಣಕ್ಕಾಗಿ ರಾಜಕಾರಣ ಮಾಡಲ್ಲ. ಉತ್ತಮ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮತ ಯಾಚಿಸುತ್ತಿದ್ದಾರೆ.
ಅದೇ ರೀತಿ ಮಾಜಿ ಶಾಸಕಿ ಸುನೀತಾ ವೀರಪ್ಪ ಗೌಡ ಅವರು ಸೋಮನಾಥಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸುನೀತಾ ಅವರು ಈ ಹಿಂದೆ ತುರಗನೂರು ಕ್ಷೇತ್ರದಿಂದ ಮೂರು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಂತರ ಒಂದು ಅವಧಿಗೆ ಅಧ್ಯಕ್ಷರಾಗಿದ್ದ ಅವರು ಹಿಂದಿನ ಬನ್ನೂರು ಕ್ಷೇತ್ರದಿಂದ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕಿಯಾಗಿ ಗೆದ್ದು, ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. 2008ರ ಚುನಾವಣೆ ವೇಳೆ ಬನ್ನೂರು ಕ್ಷೇತ್ರ ಪಕ್ಕದ ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರು. ಇದೀಗ ಮಾಜಿ ಶಾಸಕಿ ಸುನೀತಾ ಜಿ.ಪಂ. ಹುರಿಯಾಳಾಗಿದ್ದಾರೆ.
ಶಿವಮೊಗ್ಗದ ಗಾಜನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಮಾಜಿ ರೌಡಿ ಮೊಟ್ಟೆ ಸತೀಶ್ ಕಣಕ್ಕೆ ಇಳಿದಿದ್ದಾರೆ. ರೌಡಿ ತುಕರಾಮ ಹತ್ಯೆ ಪ್ರಕರಣ, ಎಸ್ಐ ಮೇಲೆ ಹಲ್ಲೆ ನಡೆಸಿದ ಮೊಕದ್ದಮೆಯಲ್ಲಿ ಸತೀಶ್ ಆರೋಪಿಯಾಗಿದ್ದ. ವಿಚಾರಣೆಯಲ್ಲಿ ಸತೀಶ್ ದೋಷಮುಕ್ತಗೊಂಡಿದ್ದ. ಈಗ ಮಾಜಿ ರೌಡಿ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಏತನ್ಮಧ್ಯೆ ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ವೆಂಕಟೇಶ್ ಮೂರ್ತಿ ಜಿ.ಪಂ.ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಒಟ್ಟಾರೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹಲವು ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದು, ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ.