ಸರಕಾರದ ವಿರುದ್ಧ ಪತ್ರ ಸಮರ ಸಾರಿರುವ ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದ್ದು,ರಾಹುಲ್ ಹಟಾವೋ ನಂತರ ಇದೀಗ ಭಾರದ್ವಾಜ್ ಹಟಾವೋ ಘೋಷಣೆ ಹೊರಡಿಸಿದೆ.
ವಿರೋಧ ಪಕ್ಷಗಳ ನಾಯಕರಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ.ಸರಕಾರವನ್ನು ವಿನಾಕಾರಣ ಇಕ್ಕಟ್ಟಿಗೆ ಸಿಲುಕಿಸಿ ರಾಜ್ಯಪಾಲರ ಹುದ್ದೆಯ ಘನತೆ ಗೌರವಗಳಿಗೆ ಮಸಿ ಬಳೆಯುತ್ತಿದ್ದಾರೆ ಎಂದು ಸಂಸದ ಚಂದ್ರೇಗೌಡ ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಹಟಾವೋ ಪ್ರತಿಭಟನೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.
ರಾಜ್ಯಪಾಲರ ವರ್ತನೆ ವಿರುದ್ಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಂಸದ ಚಂದ್ರೇಗೌಡ ತಿಳಿಸಿದ್ದಾರೆ.
ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿರುವ ಯುಪಿಎ ಸರಕಾರ, ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ. ಯುಪಿಎ ಮುಖ್ಯಸ್ಥ ಸೋನಿಯಾ ಗಾಂಧಿ ವಿರೋಧ ಪಕ್ಷಗಳ ಅವಹೇಳನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಆರೋಪಗಳಿದ್ದಲ್ಲಿ, ದಾಖಲೆಗಳ ಸಹಿತ ಬಹಿರಂಗಪಡಿಸಲಿ, ಸಿಎಂ ಕುಟುಂಬದ ವಿರುದ್ಧದ ಆರೋಪಗಳಿಗೆ ತನಿಖೆ ನಡೆಸಲು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ. ವರದಿ ಬಂದ ಬಳಿಕ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಸದ ಚಂದ್ರೇಗೌಡ ತಿಳಿಸಿದ್ದಾರೆ.