ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಪ್ರಶ್ನಿಸಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಜಗದೀಶ್ ಕಟ್ಟಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾ.ಎ.ಎಸ್.ಪಚ್ಚಾಪುರೆ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ, ಈ ಪ್ರಕರಣವನ್ನು ಕಗ್ಗಂಟು ಮಾಡದೆ. ಮುಂದಿನ ವಿಚಾರಣೆವರೆಗೆ ತನಿಖೆ ನಡೆಸದೆ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎರಡನೇ ಎಫ್ಐಆರ್ ಪ್ರಶ್ನಿಸಿ ಕಟ್ಟಾ ಜಗದೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಎಫ್ಐಆರ್ ದಾಖಲಿಸಿದ್ದರು. ಇದಕ್ಕೆ ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿತ್ತು. ಹಾಗಿದ್ದ ಮೇಲೆ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ. ಈ ರೀತಿ ಒಂದೇ ಪ್ರಕರಣದಲ್ಲಿ ಎರಡು ಬಾರಿ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಕಟ್ಟಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜಾಲಹೋಬಳಿಯಲ್ಲಿ ಇಟಾಸ್ಕಾ ಸಾಫ್ಟ್‌ವೇರ್ ಕಂಪನಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಡಿ.2ರಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಸೇರಿದಂತೆ ಹತ್ತು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಈ ಎಫ್ಐಆರ್ ಪ್ರಶ್ನಿಸಿ ಜಗದೀಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ಡಿ.23ಕ್ಕೆ ನಡೆಸುವುದಾಗಿ ತಿಳಿಸಿರುವ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತರಿಗೆ ಈ ಸಂದರ್ಭದಲ್ಲಿ ಸೂಚಿಸಿದೆ.