ಮನುಷ್ಯನ ಅಧಿಕಾರದ ಆಸೆ ಏನೆಲ್ಲಾ ರಾದ್ದಾಂತಕ್ಕೆ ಕಾರಣವಾಗುತ್ತೆ ಎಂಬುದಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಬಿಸ್ತುವಳ್ಳಿ ಬಾಬು ಅವರ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಅತ್ತ ಹೊಟ್ಟೆಪಾಡಿನ ನೌಕರಿಯೂ ಇಲ್ಲ, ಇತ್ತ ಟಿಕೆಟ್ ಕೂಡ ಇಲ್ಲದೆ ಸಮಾಜಸೇವೆಯೇ ಕಂಟಕವಾದ ಪ್ರಸಂಗ ಇದಾಗಿದೆ.
ಕೆಲಸವೂ ಹೋಯ್ತು, ಪಕ್ಷದ ಟಿಕೆಟ್ ಕೂಡ ಇಲ್ಲದಂತಾಯ್ತು: ದಾವಣಗೆರೆಯ ಪೊಲೀಸ್ ಕಾನ್ಸಸ್ಟೇಬಲ್ ಬಿಸ್ತುವಳ್ಳಿ ಬಾಬು ಅವರಿಗೆ ರಾಜಕೀಯಕ್ಕೆ ಸೇರಬೇಕೆಂಬ ಇಚ್ಛೆ ಬಲವಾಗಿ ಕಾಡತೊಡಗಿತ್ತು. ಅದಕ್ಕಾಗಿಯೇ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು.
ತಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಡುವ ಮುನ್ನ ದಾವಣಗೆರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಂದ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಭರವಸೆ ನೀಡಿದ್ದರಂತೆ. ಅದನ್ನು ನಂಬಿ ಬಾಬು ಪೊಲೀಸ್ ನೌಕರಿಗೆ ಗುಡ್ ಬೈ ಹೇಳಿದ್ದರು .
ಆದರೆ ಇತ್ತ ಕಾಂಗ್ರೆಸ್ ಪಕ್ಷ ಕೆ.ಪಿ.ಬಾಲಯ್ಯ ಎಂಬವರಿಗೆ ಜಿಲ್ಲಾ ಪಂಚಾಯ್ತಿ ಟಿಕೆಟ್ ನೀಡಿದೆ. ಒಟ್ಟಾರೆ ಸಮಾಜಸೇವೆ ಮಾಡೋ ಆಸೆಯಿಂದ ಪೊಲೀಸ್ ನೌಕರಿಗೆ ರಾಜೀನಾಮೆ ಕೊಟ್ಟು ಬಂದಿದ್ದ ಬಾಬುಗೆ ಕಾಂಗ್ರೆಸ್ ಕೈ ಕೊಟ್ಟು ಬಿಟ್ಟಿದೆ! ಪೊಲೀಸ್ ಕೆಲಸದಲ್ಲಿ ಸಮಾಜಸೇವೆ ಮಾಡಲು ಸಾಧ್ಯವಿಲ್ಲ ಎಂದು ಮನಗಂಡು, ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನದಿಂದ ಪಕ್ಷೇತರನಾಗಿ ಸ್ಪರ್ಧಿಸಲು ಮುಂದಾಗಿಲ್ಲ. ನಾನಿನ್ನೂ ಯುವಕ ಇನ್ನು ಮುಂದಾದರೂ ಪಕ್ಷ ನನಗೆ ಅವಕಾಶ ಕೊಡುತ್ತದೆ ಎಂಬ ನಂಬಿಕೆ ನನ್ನದು ಎಂದು ಬಾಬು ತಿಳಿಸಿದ್ದಾರೆ.