ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ, ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸದೆ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ತೊಡಗಿದೆ. ಬಡವರ ಹಿಂದುಳಿದವರ ಪರವಾಗಿ ಯಾವುದೇ ಕಾರ್ಯಗಳನ್ನು ಹಮ್ಮಿಕೊಂಡಿಲ್ಲ ಎಂದು ಕಿಡಿಕಾರಿದರು.
ಹಗರಣಗಳಲ್ಲಿ ಮುಳುಗಿರುವ ಬಿಜೆಪಿ ಸರಕಾರ, ಚುನಾವಣೆ ನಂತರ ಪತನಗೊಳ್ಳುವುದು ಖಚಿತವಾಗಿದೆ.ಇದೊಂದು ಜನವಿರೋಧಿ ಸರಕಾರವಾಗಿದ್ದು, ಇಲ್ಲಿಯವರೆಗೆ ಯಾವುದೇ ಮುಖ್ಯಮಂತ್ರಿ ಇಂತಹ ಕೆಟ್ಟ ಹೀನಾಯ ಸ್ಥಿತಿಗೆ ತಲುಪಿರಲಿಲ್ಲ ಎಂದು ವ್ಯಂಗವಾಡಿದರು.
ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿ ರಾಷ್ಟ್ರಾಧ್ಯಕ್ಷ ಗಡ್ಕರಿ, ಮುಖ್ಯಮಂತ್ರಿಯೊಂದಿಗೆ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಕೇಂದ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ ಬಿಜೆಪಿ ಪಕ್ಷ ದ್ವಂದ ನೀತಿಯನ್ನು ತೋರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜನಪರ ಕಾರ್ಯಗಳಿಗೆ ಹಣದ ಕೊರತೆಯಿದೆ ಎಂದು ಹೇಳುವ ಮುಖ್ಯಮಂತ್ರಿ, ನೆರೆಯ ತಮಿಳುನಾಡು ಕೇರಳ ರಾಜ್ಯಗಳ ದೇವಸ್ಥಾನಗಳಿಗೆ ಕೋಟಿ ಕೋಟಿ ಹಣ ನೀಡಲು ಹೇಗೆ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.