ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟ ಮಂತ್ರಿಗಳ ದಾಖಲೆ ಇದೆ-ರಾಜಭವನಕ್ಕೆ ಬನ್ನಿ: ಗವರ್ನರ್ (H R Bhardwaj | corrupt Karnataka ministers | BJP | Yaddyurappa)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾರೇ ಆಗಲಿ ರಾಜಭವನಕ್ಕೆ ಬಂದರೆ ಬಿಜೆಪಿ ಸರಕಾರದ ಭ್ರಷ್ಟ ಮಂತ್ರಿಗಳ ದಾಖಲೆಗಳನ್ನು ಒದಗಿಸಲು ಸಿದ್ದನಿದ್ದೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಸವಾಲು ಹಾಕುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಮತ್ತು ಗವರ್ನರ್ ನಡುವಿನ ಜಂಗೀಕುಸ್ತಿ ಮುಂದುವರಿದಂತಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದಿರುವ ಮುಖ್ಯಮಂತ್ರಿಗಳ ಹೇಳಿಕೆಗೆ ಇಇಪಿಸಿ ಇಂಡಿಯಾ ಸಂಸ್ಥೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಕ್ಷಿಣ ವಲಯದ ಎಕ್ಸ್‌ಪರ್ಟ್ ಅವಾರ್ಡ್ 2010 ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸರಕಾರ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅಗತ್ಯವಿಲ್ಲ. ಯಾಕೆಂದರೆ ಸರಕಾರದಲ್ಲಿರುವ ಭ್ರಷ್ಟ ಮಂತ್ರಿಗಳು, ಶಾಸಕರ ಪಟ್ಟಿ ನನ್ನ ಬಳಿ ಇದೆ. ಅದರ ಅಗತ್ಯವಿದ್ದಲ್ಲಿ ಯಾರೇ ಆಗಲಿ ರಾಜಭವನಕ್ಕೆ ಬಂದು ಪರಿಶೀಲಿಸಬಹುದು ಎಂದು ರಾಜ್ಯಪಾಲರು ನೇರ ಆಹ್ವಾನ ನೀಡಿದ್ದಾರೆ. ಈಗಾಗಲೇ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದ್ದೇನೆ. ಅಲ್ಲದೇ ಇನ್ನಷ್ಟು ಸಚಿವರ, ಶಾಸಕರ ವಿವರ ಕೂಡ ನನ್ನ ಬಳಿ ಇದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರದ ವಿರುದ್ಧ ದೇಶದ ವಿವಿಧೆಡೆ ಬೃಹತ್ ರಾಲಿ ನಡೆಸುತ್ತಿದೆ. ಆದರೆ ಕರ್ನಾಟಕದಲ್ಲಿ ಯಾಕೆ ನಡೆಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಪ್ರಮುಖ ಮುಖಂಡರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಬಿಜೆಪಿ ಏನು ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ನಾನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ, ಭ್ರಷ್ಟ ಮಂತ್ರಿಗಳ ಪಟ್ಟಿ ಕೊಡಲು ನಾನು ಸಿದ್ದ. ಅದನ್ನು ಮುಖ್ಯಮಂತ್ರಿಗಳಿಗೂ ಒದಗಿಸುತ್ತೇನೆ. ಅವರು ರಾಜಭವನಕ್ಕೆ ಬರಲಿ ಎಂದು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ರಾಜ್ಯದಲ್ಲಿ ನಡೆದಿರುವ ಭೂ ಹಗರಣ, ಅಕ್ರಮ ಗಣಿಗಾರಿಕೆ ಕುರಿತಂತೆ ರಾಜ್ಯಪಾಲ ಭಾರದ್ವಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎರಡು ಪತ್ರ ಬರೆದು ವಿವರಣೆ ನೀಡುವಂತೆ ಕೋರಿದ್ದರು. ಆದರೆ ಮುಖ್ಯಮಂತ್ರಿಗಳು ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ. ಅಷ್ಟೇ ಅಲ್ಲ ರೆಡ್ಡಿ ಬ್ರದರ್ಸ್ ಕೂಡ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿಲ್ಲ ಎಂದು ಎರಡು ಸಾಲಿನ ಉತ್ತರ ನೀಡಿದ್ದರು. ಆ ನಿಟ್ಟಿನಲ್ಲಿ ಸಿಎಂ ನೀಡಿರುವ ಉತ್ತರ ತನಗೆ ಸಮಾಧಾನ ತಂದಿಲ್ಲ. ಮತ್ತೆ ಪತ್ರ ಬರೆಯುವುದಾಗಿ ರಾಜ್ಯಪಾಲರು ತಿಳಿಸಿದ್ದರು.

ರಾಜಭವನಕ್ಕೆ ಮೊಯ್ಲಿ ದಿಢೀರ್ ಭೇಟಿ: ರಾಜ್ಯಪಾಲ ಭಾರದ್ವಾಜ್ ಮತ್ತು ಆಡಳಿತಾರೂಢ ಬಿಜೆಪಿ ಸರಕಾರದ ನಡುವೆ ಪತ್ರ ಸಮರ, ವಾಗ್ದಾಳಿ ನಡೆಯುತ್ತಿರುವ ನಡುವೆಯೇ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ದಿಢೀರ್ ರಾಜಭವನಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಚರ್ಚೆಯ ನಂತರ ಮೊಯ್ಲಿ ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದ್ದಾರೆ. ಆದರೆ ವೀರಪ್ಪ ಮೊಯ್ಲಿ ಅವರು ಪದೇ, ಪದೇ ರಾಜಭವನಕ್ಕೆ ಭೇಟಿ ನೀಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ನಾಳೆ ಗವರ್ನರ್ ಭೇಟಿ ಆಗ್ತೇನೆ-ಸಿಎಂ: ಭ್ರಷ್ಟಾಚಾರ ಪ್ರಕರಣದ ಕುರಿತು ರಾಜ್ಯಪಾಲರು ತನ್ನ ಬಳಿ ದಾಖಲೆಗಳು ಇವೆ ಎಂದು ಬಹಿರಂಗ ಹೇಳಿಕೆ ನೀಡಿರುವುದಕ್ಕೆ ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದರೆ, ಮತ್ತೊಂದೆಡೆ ತಾನು ಶುಕ್ರವಾರ ರಾಜಭನಕ್ಕೆ ಭೇಟಿ ನೀಡಿ ರಾಜ್ಯಪಾಲರ ಜತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಏತನ್ಮಧ್ಯೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆ ತನ್ನ ಬಳಿ ಇದೆ ಎಂಬ ರಾಜ್ಯಪಾಲರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳು, ದಾಖಲೆ ಸಂಗ್ರಹಿಸುವಂತೆ ಅವರಿಗೆ ಸೂಚನೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಾಳೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆಯುವುದಾಗಿಯೂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ