ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) 30 ದಿನದೊಳಗೆ ಮಾಹಿತಿಗಳನ್ನು ಒದಗಿಸದಿದ್ದರೆ 25 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಮಟ್ಟದ ಮಾಹಿತಿ ಆಯೋಗದ ಆಯುಕ್ತರು ಮತ್ತು ಅರ್ಜಿದಾರರ ಜತೆ ರಾಜ್ಯ ಮಾಹಿತಿ ಆಯೋಗ ಆಯೋಜಿಸಿದ್ದ ವಿಡಿಯೋ ಕಾನ್ಫ್‌ರೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು ಈ ರೀತಿ ಎಚ್ಚರಿಕೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದರೂ ಕೂಡ ಅಧಿಕಾರಿಗಳು ನಿಗದಿತ ಸಮಯದಲ್ಲಿ ಮಾಹಿತಿ ನೀಡುತ್ತಿಲ್ಲ ಎಂದು ಕೆಲವು ಅರ್ಜಿದಾರರು ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡಿದರು. ಅಲ್ಲದೇ ಆಯೋಗದ ಆಯುಕ್ತರು ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಮಾಡುತ್ತಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅರ್ಜಿದಾರರ ಆಗ್ರಹಕ್ಕೆ ಸ್ಪಂದಿಸಿದ ಅವರು, ಮಾಹಿತಿ ನೀಡಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ದೂರುಗಳು ಬಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಾಹಿತಿ ಆಯುಕ್ತರಿಗೆ ಸೂಚನೆ ನೀಡಿದರು. ಅಷ್ಟೇ ಅಲ್ಲ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.