ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ಬಿಜೆಪಿ ಇದೀಗ ಬೋಫೋರ್ಸ್ ಫಿರಂಗಿಯನ್ನು ತಿರುಗಿಸಿದೆ.
80ರ ದಶಕದಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತವು ಮಾಡಿದ್ದ ಬೋಫೋರ್ಸ್ ಫಿರಂಗಿ ಒಪ್ಪಂದದ ಹಗರಣದಲ್ಲಿ, ಹಣ ಪಡೆದಿದ್ದಾರೆಂಬ ಆರೋಪ ಹೊತ್ತಿರುವ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿಯ ಮುಟ್ಟುಗೋಲು ಹಾಕಲಾಗಿದ್ದ ಬ್ಯಾಂಕ್ ಖಾತೆಗಳನ್ನು ಬಿಡುಗಡೆಗೊಳಿಸಿದ್ದಕ್ಕೆ ಕೇಂದ್ರ ಕಾನೂನು ಮಂತ್ರಿಯಾಗಿದ್ದ ಹಂಸರಾಜ್ ಭಾರದ್ವಾಜ್ ಅವರೇ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವಾಮನ ಆಚಾರ್ಯ ಹೇಳಿದ್ದಾರೆ.
ತನ್ನ ಬಳಿ ರಾಜ್ಯದ ಭ್ರಷ್ಟ ಮಂತ್ರಿಗಳ ಪಟ್ಟಿಯೇ ಇದೆ, ಯಾರು ಬೇಕಾದರೂ ಬಂದರೆ ರಾಜಭವನದಿಂದ ಪಡೆದುಕೊಳ್ಳಬಹುದು ಎಂದು ಹೇಳಿದ ಮರು ದಿನ, ರಾಜ್ಯಪಾಲರ ಮೇಲೆ ವಾಗ್ದಾಳಿ ನಡೆಸಲು ಬಿಜೆಪಿ ಬೋಫೋರ್ಸ್ ಫಿರಂಗಿ ಹಗರಣವನ್ನು ಹೊರತೆಗೆಯಿತು. ತಾನು ಈಗಾಗಲೇ ಮುಖ್ಯಮಂತ್ರಿಗೆ ಈ ಪಟ್ಟಿಯನ್ನು ಕೊಟ್ಟಿದ್ದೇನೆ ಎಂದೂ ಭಾರದ್ವಾಜ್ ಮಾಧ್ಯಮಗಳಿಗೆ ತಿಳಿಸಿದ್ದರು.
ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಸಾಧ್ಯತೆಗಳನ್ನು ಮಟ್ಟ ಹಾಕುವುದಕ್ಕಾಗಿ, ಹೆಸರು ಕೆಡಿಸುವ ಉದ್ದೇಶದಿಂದ ರಾಜ್ಯಪಾಲರು ಈ ರೀತಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ "ರಾಜ್ಯಪಾಲ ಹಠಾವೋ" ಚಳವಳಿಯನ್ನು ಬಿಜೆಪಿ ಹಮ್ಮಿಕೊಳ್ಳಲಿದೆ ಎಂದು ಆಚಾರ್ಯ ಹೇಳಿದರು.
ರಾಜ್ಯಪಾಲರ ವರ್ತನೆಯ ಕುರಿತು ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ದೂರು ಸಲ್ಲಿಸಲು ಕೂಡ ಬಿಜೆಪಿ ಈಗಾಗಲೇ ನಿರ್ಧರಿಸಿದೆ.