ನಾ ಸಾಯೋ ಮುನ್ನ ಎಚ್‌ಡಿಕೆ ಮತ್ತೆ ಸಿಎಂ ಆಗ್ಬೇಕು: ದೇವೇಗೌಡ
ರಾಯಚೂರು, ಶುಕ್ರವಾರ, 24 ಡಿಸೆಂಬರ್ 2010( 11:43 IST )
'ನಾನು ಸಾಯುವ ಮುನ್ನ ಎಚ್.ಡಿ.ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವ ಬಯಕೆ ನನ್ನದಾಗಿದೆ. ಹಾಗಾಗಿ ಪಂಚಾಯ್ತಿ ಚುನಾವಣೆ ಫಲಿತಾಂಶ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ವೇದಿಕೆಯಾಗಲಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನದ ಇಚ್ಛೆಯನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ.
ದೇವದುರ್ಗ ತಾಲೂಕಿನ ಅರಕೇರಾ ಹಾಗೂ ಕೊಪ್ಪರ ಗ್ರಾಮದಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಪ್ರಚಾರ ಭಾಷಣ ಮಾಡಿದ ಅವರು, ಕುಮಾರಸ್ವಾಮಿ ತಮ್ಮ ಪುತ್ರನೆಂಬ ಕಾರಣಕ್ಕೆ ಹೊಗಳುತ್ತಿಲ್ಲ. ಮುಖ್ಯಮಂತ್ರಿಯಾಗಿ ತಮಗಿಂತ ಒಂದು ಹೆಜ್ಜೆ ಮುಂದಿಟ್ಟರು. ವಿನೂತನ ಯೋಜನೆಗಳ ಅನುಷ್ಠಾನ, ಗ್ರಾಮ ವಾಸ್ತವ್ಯ, ದೇಶದ ಯಾವುದೇ ರಾಜಕಾರಣಿ ಮಾಡದ ಎಚ್ಐಬಿ ಸೋಂಕಿತರ ಮನೆಯಲ್ಲಿ ಊಟ, ವಾಸ್ತವ್ಯ ಹೂಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಹೊಸ ವ್ಯವಸ್ಥೆ ತರುವ ಅಧಇಕಾರ ಮತ್ತು ಹೊಣೆ ಜನರ ಕೈಯಲ್ಲಿದೆ. ಮೊದಲ ಬಾರಿಗೆ ಪಂಚಾಯ್ತಿ ಚುನಾವಣೆ ಪ್ರಚಾರಕ್ಕೆ ರಾಯಚೂರು ಜಿಲ್ಲೆಗೆ ಬಂದಿರುವೆ. ಈ ಚುನಾವಣೆ ಪ್ರಚಾರಕ್ಕೆ ಮಾಜಿ ಪ್ರಧಾನಿಯೊಬ್ಬರು ಬರಬೇಕಿತ್ತೆ? ಎಂದು ಪ್ರಶ್ನಿಸುವವರಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಅಲ್ಲದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜಕೀಯ ಜೀವನದಲ್ಲಿ ಇಂಥ ಕೀಳು ದರ್ಜೆ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ. ಇಳಿ ವಯಸ್ಸಿನಲ್ಲಿ ದಗಾಕೋರ, ಮೋಸಗಾರನನ್ನು ನೋಡಿದ ಪಾಪಪ್ರಜ್ಞೆ ಕಾಡುತ್ತಿದೆ. ಭಾಗ್ಯಲಕ್ಷ್ಮಿ ಕಾರ್ಯಕ್ರಮಕ್ಕೆಂದು ಪ್ರತಿ ಜಿಲ್ಲೆಗೆ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಸಾಂಕೇತಿಕವಾಗಿ 10-15 ಸೀರೆಗಳನ್ನು ಹಂಚಿ ಸಾವಿರಾರು ಸೀರೆಗಳ ಹಂಚಿಕೆಯ ಲೆಕ್ಕ ತೋರಿಸಿದ್ದಾರೆ ಎಂದು ದೂರಿದರು.