ವಿಜ್ಞಾನದ ಹೆಸರಿನಲ್ಲಿ ಪ್ರಕೃತಿ ಶೋಷಣೆಯಾಗುತ್ತಿದೆ: ಕಾಗೇರಿ
ಗುಲ್ಬರ್ಗ, ಶುಕ್ರವಾರ, 24 ಡಿಸೆಂಬರ್ 2010( 14:57 IST )
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೇಶದ ಸಂಸ್ಕೃತಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು.
ವಿಜ್ಞಾನದ ಹೆಸರಿನಲ್ಲಿ ಪ್ರಕೃತಿ ಶೋಷಣೆಯಾಗುತ್ತಿದೆ. ಸಮಾಜದಲ್ಲಿ ಕಂದಕ ನಿರ್ಮಿಸಿ ಸ್ವಾರ್ಥ ಸಾಧನೆ ಮಾಡಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ, ಅವ್ಯವಹಾರದಿಂದ ಗೌರವದಿಂದ ತಲೆಎತ್ತಿ ತಿರುಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿಭಾಗ ಸಮಗ್ರ ವಿಕಾಸಕ್ಕೆ ಕಲಬುರ್ಗಿ ಕಂಪು, ಭಾರತ ವಿಕಾಸ ಸಂಗಮದಲ್ಲಿ ವಿಕಾಸ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ತರಬೇಕಿದೆ. ಎಲ್ಲೆಡೆ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ಎದುರಾಗಿದೆ. ಭಯೋತ್ಪಾದಕರ ಅಟ್ಟಹಾಸ, ಕಾನೂನು ಕದಡುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಪರಿವರ್ತನೆಗೆ ಸಂಘ ಸಂಸ್ಥೆಗಳೂ ಸೇರಿದಂತೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ ಎಂದರು.
ರಾಜಕೀಯ ವ್ಯವಸ್ಥೆ, ಸರಕಾರದಿಂದ ಎಲ್ಲ ಹಂತದಲ್ಲೂ ಬದಲಾವಣೆ ತರಲು ಸಾಧ್ಯವಾಗದಿರಬಹುದು. ಆದರೆ ಸಮಗ್ರ ಬದಲಾವಣೆಗೆ ಸಂಘ-ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ವಿಶೇಷವಾಗಿ ಕೆ.ಎನ್.ಗೋವಿಂದಾಚಾರ್ಯ, ಬಸವರಾಜ ಪಾಟೀಲ್ ಸೇಡಂ ಮಾಡಿರುವ ಈ ಕಾರ್ಯ ಶ್ಲಾಘನೀಯ ಎಂದರು.