ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲೇ ಮುಂದುವರಿಯಬೇಕು ಎಂಬುದು ತಮ್ಮ ಬಯಕೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಸಿರುಗುಪ್ಪ ತಾಲೂಕಿನ ರಾರಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅನುಭವಿಗಳು, ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಕ್ರಾಂತಿಕಾರಿ ಕೆಲಸ ಮಾಡಿದೆ. ಮುಖ್ಯಮಂತ್ರಿ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದು, ಕಾರಣ ಏನೆಂಬುದು ತಮಗೆ ತಿಳಿದಿಲ್ಲ. ಆದರೆ ರಾಷ್ಟ್ರಕ್ಕಿಂತ ರಾಜ್ಯ ರಾಜಕಾರಣಕ್ಕೆ ಅವರ ಅಗತ್ಯ ಇದೆ ಎಂದರು.
ಭೂಮಿ ವಶ ಪ್ರಕರಣ ಸೇರಿ ಇತರೆ ಪ್ರಕರಣಗಳಲ್ಲಿ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದೆ ಎಂದು ಹೇಳುತ್ತಿರುವ ರಾಜ್ಯಪಾಲರು, ಭ್ರಷ್ಟಾಚಾರದ ಕಚೇರಿ ತೆರೆಯಲಿ ಎಂದು ವಾಗ್ದಾಳಿ ನಡೆಸಿದ ಸಚಿವರು, ಯಾರ ಭ್ರಷ್ಟಾಚಾರ ಏನು, ಎಷ್ಟು ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
ರಾಜ್ಯಪಾಲರು ಗಂಭೀರವಾಗಿ ಕೆಲಸ ಮಾಡದೆ ಪ್ರತಿಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ಇದುವರೆಗಿನ ರಾಜ್ಯಪಾಲರು ಇಷ್ಟು ಹೀನಾಯವಾಗಿ ವರ್ತಿಸಿರಲಿಲ್ಲ ಎಂದು ಕಿಡಿಕಾರಿದರು.