ಭ್ರಷ್ಟಾಚಾರ ವಿಸ್ತರಿಸಲು ಯಡ್ಡಿ ರಾಷ್ಟ್ರ ರಾಜಕಾರಣಕ್ಕೆ: ವಿಶ್ವನಾಥ್
ಮಡಿಕೇರಿ, ಶನಿವಾರ, 25 ಡಿಸೆಂಬರ್ 2010( 11:52 IST )
NRB
ಭ್ರಷ್ಟಾಚಾರ, ಭೂ ಹಗರಣ, ಕೋಮುವಾದವನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಒಲವು ವ್ಯಕ್ತ ಪಡಿಸಿದ್ದಾರೆ ಎಂದು ಸಂಸದ ಎಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಸೇರಿಕೊಂಡು ಕರ್ನಾಟಕ ರಾಜ್ಯದಲ್ಲಿ ಆಡಳಿತಾವಧಿಯಲ್ಲಿ ಮಾಡಿರುವುದನ್ನು ರಾಷ್ಟ್ರಾಧ್ಯಂತ ವಿಸ್ತರಿಸಲು ಹೋಗುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯಪಾಲ, ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ದುರ್ಬಲಗೊಳಿಸುವ ಪ್ರಯತ್ನ ಬಿಜೆಪಿ ಸರಕಾರದಿಂದ ನಡೆದಿದೆ. ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಸಚಿವರು ಹಾಗೂ ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ದೂರುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ, ಭೂಹಗರಣ, ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುವ ಮೂಲಕ ರಾಜ್ಯಪಾಲರು ಸಕ್ರಿಯರಾಗಿದ್ದಾರೆ ಎಂದರು.
ಮಡಿಕೇರಿ ನಗರಸಭೆ ವರಿಷ್ಠರ ಚುನಾವಣೆ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷದ ಸ್ಥಳೀಯ ನಾಯಕರ ಏಜೆಂಟರಂತೆ ವರ್ತಿಸಿರುವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಕಾರಿ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೊಡಗು ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದ್ದಾರೆ.